ಬೆಂಗಳೂರು, ಜು.26- ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿರುವ ಸುಸಂದರ್ಭದಲ್ಲಿ ರಾಜ್ಯ ಮಟ್ಟದ ಸಮಾರಂಭವು ಜುಲೈ 27ರ ಸೋಮವಾರದಂದು ಬೆಳಗ್ಗೆ 11.00 ಗಂಟೆಗೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಲಿದೆ.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜನಸ್ನೇಹಿ ಆಡಳಿತ, ಒಂದು ವರ್ಷ; ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ ಕಾರ್ಯಕ್ರಮವು ಏಕಕಾಲಕ್ಕೆ ಬಿತ್ತರಗೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೇಂದ್ರ ಕಚೇರಿಯು ಎಲ್ಲಾ ಜಿಲ್ಲಾಡಳಿತಗಳೊಡನೆ ಸಮನ್ವಯ ಸಾಧಿಸಿ ಕಾರ್ಯಕ್ರಮದ ನೇರ ಪ್ರಸಾರ ಆಯೋಜಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಮುಖ್ಯ ಸಭಾಂಗಣದಲ್ಲಿ ವರ್ಚುವಲ್ ಪ್ಲಾಟ್‍ಫಾರಂ ಮೂಲಕ ನಾಳೆ ಬೆಳಗ್ಗೆ 11.00 ಗಂಟೆಯ ಕಾರ್ಯಕ್ರಮದ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಮುಂದೆ ಆಗಬೇಕಾದ ಕೆಲಸಗಳು, ಪ್ರವಾಹ ಪರಿಹಾರ ಮತ್ತು ಕೊವಿಡ್-19 ಸೋಂಕು ನಿಯಂತ್ರಣ ಸೇರಿದಂತೆ ಅನೇಕ ವಿಷಯಗಳ ಕುರಿತು ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡುವರು ಹಾಗೂ ವಿವಿಧ ಯೋಜನೆಗಳ ಜಿಲ್ಲಾ ಫಲಾನುಭವಿಗಳೊಂದಿಗೆ ಅವರು ಸಂವಾದ ನಡೆಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೇಂದ್ರಕಚೇರಿ ಹೊರತಂದಿರುವ ರಾಜ್ಯ ಸರ್ಕಾರದ ವರ್ಷದ ಸಾಧನೆಯ ವಿವರಗಳನ್ನೊಳಗೊಂಡ ಸವಾಲುಗಳ ಒಂದು ವರ್ಷ, ಪರಿಹಾರದ ಸ್ಪರ್ಶ ಪುಸ್ತಕವನ್ನು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ ಅವರು ಬಿಡುಗಡೆ ಮಾಡುವರು.
ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸಂಸದರು, ಶಾಸಕರುಗಳು ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆ ತಿಳಿಸಿದೆ.