ಬೆಂಗಳೂರು, ಏಪ್ರಿಲ್ 17: ಕೋವಿಡ್19 ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಮೊದಲ ಸಾಲಿನಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದ್ದಾರೆ. ಜನರು ಸಾಮಾಜಿಕ ಅಂತರ ಕಾಪಾಡುವ ಜತೆಗೆ ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಕಾನೂನು ಕ್ರಮ ಜರುಗಿಸುವ ಮೂಲಕ ಕೊರೋನಾ ತಡೆಗಟ್ಟಲು ಟೊಂಕ ಕಟ್ಟಿ ನಿಂತಿದ್ದಾರೆ.
ಆದರೆ, ಪೊಲೀಸರೇ ಕೊರೋನಾ ಸೋಂಕಿನಿಂದ ಬಳಲುವಂತಾಗಿದೆ. ಬೆಂಗಳೂರು ನಗರದ ಎಂಟು ಪೊಲೀಸ್ ವಲಯಗಳಲ್ಲಿ 90 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಎರಡು ಸಲ ವಾಕ್ಸಿನ್ ಪಡೆದರೂ ಕೊರೋನಾ ಕಾಣಿಸಿಕೊಂಡಿರುವುದು ಪೊಲೀಸರಲ್ಲಿ ಆತಂಕ ಹೆಚ್ಚಿಸಿದೆ.
ಕೊರೋನಾ ವಾರಿಯರ್‌ಗಳಾಗಿ ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ಪೊಲೀಸರದ್ದು ಅನಿರ್ದಿಷ್ಟಾವಧಿ ಕೆಲಸ. ಹೀಗಾಗಿ ಮೊದಲ ಹಂತದಲ್ಲಿಯೇ ಬಹುತೇಕ ಸಿಬ್ಬಂದಿ ವ್ಯಾಕ್ಸಿನ್ ಕೂಡ ಪಡೆದಿದ್ದರು. ಕೊರೋನಾ ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಇದೀಗ ಪೊಲೀಸರು ಕೂಡ ಸೋಂಕಿಗೆ ತುತ್ತಾಗುತ್ತಿದ್ದಾರೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಡಿವೈಎಸ್ಪಿ ದರ್ಜೆಯ ಮುಖ್ಯ ಲೆಕ್ಕಾಧಿಕಾರಿಯನ್ನು ಕೊರೋನಾ ಬಲಿ ಪಡೆದಿತ್ತು. ಇದೀಗ ಬೆಂಗಳೂರು ನಗರದ ಎಂಟು ವಲಯದ 90 ಕ್ಕೂ ಹೆಚ್ಚು ಪೊಲೀಸರಿಗೆ ಕೊರೋನಾ ಸೋಂಕು ತಗಲಿರುವ ಸಂಗತಿ ಇದೀಗ ಹೊರ ಬಿದ್ದಿದೆ.
ಇನ್ನು ಕೊರೋನಾ ಸೋಂಕು ತಗುಲಿದ ಪೊಲೀಸ್ ಸಿಬ್ಬಂದಿಯನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಲು ಪೊಲೀಸರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸ್ಯಾನಿಟೈಸ್ ಮಾಡುವ ಜತೆಗೆ ಪೊಲೀಸ್ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ಜತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೂಚಿಸಲಾಗಿದೆ.
ಪಶ್ಚಿಮ ವಿಭಾಗ – 34
ಪೂರ್ವ ವಿಭಾಗ-10
ಉತ್ತರ ವಿಭಾಗ -3
ದಕ್ಷಿಣ ವಿಭಾಗ -6
ಆಗ್ನೇಯ ವಿಭಾಗ -10
ವೈಟ್‌ಫೀಲ್ಡ್ – 5
ಕೇಂದ್ರ ವಿಭಾಗ -8