ಹುಬ್ಬಳ್ಳಿ: ಮನೆಗಳಿಗೆ ಗ್ಯಾಸ್ ಪೂರೈಸುವ ಪೈಪ್‍ಲೈನ್ ಒಡೆದು ಅಪಾರ ಪ್ರಮಾಣದ ಅಡುಗೆ ಅನಿಲ ಸೋರಿಕೆಯಿಂದಾಗಿ, ಸ್ಥಳೀಯರು ಆತಂಕಕ್ಕೆ ಒಳಗಾದ ಘಟನೆ ಹುಬ್ಬಳ್ಳಿಯ ಹಳೇ ಬಾದಾಮಿನಗರದಲ್ಲಿ ಕಂಡುಬಂದಿದೆ.
ಇಂದು ಮಧ್ಯಾಹ್ನ ಐಒಎಜಿ ಒಡೆತನದ ಪೈಪ್ ಲೈನ್ ಒಡೆದು ಕೆಲ ಸಮಯ ಅನಿಲ ಸೋರಿಕೆಯಾದ ಪರಿಣಾಮ ಸ್ಥಳೀಯರು ಆತಂಕಕ್ಕೆ ಒಳಗಾದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಐಒಎಜಿ ಸಿಬ್ಬಂದಿಗಳು ಮೇನ್ ವಾಲ್ ಬಂದ್ ಮಾಡಿ ಭಾರಿ ಅನಾಹುತ ತಪ್ಪಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಅಡುಗೆ ಅನಿಲ ಪೂರೈಸುವ ಪೈಪ್‍ಲೈನ್ ಸಂಪೂರ್ಣ ಒಡೆದಿದ್ದರಿಂದಾಗಿ ಕೂಡಲೇ ಪೈಪ್‍ಲೈನ್ ದುರಸ್ತಿ ಕಾರ್ಯವನ್ನು ಐಒಎಜಿ ಸಿಬ್ಬಂದಿ ಮಾಡಿದ್ದಾರೆ. ಆದರೆ ಇತ್ತ ದುರಸ್ತಿಕಾರ್ಯಕ್ಕಾಗಿ ಗ್ಯಾಸ್ ಬಂದ್ ಮಾಡಿದ್ದರಿಂದಾಗಿ ಅಡುಗೆ ಮಾಡಲು ಮಹಿಳೆಯರು ಕೆಲ ಕಾಲ ಪರದಾಡುವಂತಾಗಿದೆ.
ಈ ಹಿಂದೆಯೂ ಇದೇ ಸ್ಥಳದಲ್ಲಿ ಗ್ಯಾಸ್ ಪೈಪ್ ಲೈನ್ ಒಡೆದು ಮೂರು ಗಂಟೆಗಳ ಕಾಲ ಸಂಪರ್ಕ ಕಡಿತಗೊಂಡಿತ್ತು. ಈಗ ಮತ್ತೊಮ್ಮೆ ಸಮಸ್ಯೆಯಾಗಿದ್ದು, ಸ್ಥಳೀಯರು ಸೂಕ್ತ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿದ್ದಾರೆ.
Laxmi News 24×7