ಬೆಂಗಳೂರು: ಕೊರೊನಾ ಕಾರಣದಿಂದ ಸ್ಥಗಿತದೊಂಡಿದ್ದ ಸಿನಿರಂಗದ ಚಿತ್ರೀಕರಣಕ್ಕೆ ಸದ್ಯ ಮರುಚಾಲನೆ ಲಭಿಸುತ್ತಿದೆ. ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ‘ಫ್ಯಾಂಟಮ್’ ಸಿನಿಮಾದ ಚಿತ್ರೀಕರಣ ಹೈದರಾಬಾದ್‍ನಲ್ಲಿ ಆರಂಭವಾಗಿದೆ.
ಹೈದರಾಬಾದ್‍ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರತಂಡ ಗಣಪನಿಗೆ ಪೂಜೆ ಸಲ್ಲಿಸುವ ಮೂಲಕ ಚಿತ್ರೀಕರಣದ ಕೆಲಸಕ್ಕೆ ಚಾಲನೆ ನೀಡಿದೆ. ಕೊರೊನಾ ಲಾಕ್‍ಡೌನ್ ಮುನ್ನವೇ ಚಿತ್ರತಂಡ ಹೈದರಾಬಾದ್‍ನಲ್ಲಿ ಚಿತ್ರೀಕರಣ ಆರಂಭಿಸಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿರಬೇಕಿತ್ತು. ಆದರೆ ಕೊರೊನಾ ಲಾಕ್‍ಡೌನ್ ಕಾರಣದಿಂದ ಬ್ರೇಕ್ ಬಿದ್ದಿತ್ತು.
ರಾಜ್ಯದಲ್ಲಿ ಸಿನಿಮಾ ಶೂಟಿಂಗ್‍ಗೆ ಅವಕಾಶ ನೀಡಿಲ್ಲವಾದರೂ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಾರ್ಗಸೂಚಿಗಳನ್ನು ಜಾರಿ ಮಾಡಿ ಶೂಟಿಂಗ್‍ಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶೂಟಿಂಗ್ ಆರಂಭಿಸಿದೆ. ವಿಶೇಷ ಎಂದರೇ ಚಿತ್ರದ ಶೂಟಿಂಗ್ ವೇಳೆ ಅಗತ್ಯವಿರುವ ಸಿಬ್ಬಂದಿಯನ್ನು ಬೆಂಗಳೂರಿನಿಂದಲೇ ಕರೆದುಕೊಂಡು ಹೋಗುವ ಮೂಲಕ ಕನ್ನಡಿಗರಿಗೆ ಮನ್ನಣೆ ನೀಡಲಾಗಿದೆ.
ಈ ಕುರಿತು ಚಿತ್ರತಂಡ ಮಾಹಿತಿ ನೀಡಿದ್ದು, ಇಂದು ಕೊರೊನಾ ಬಳಿಕ ಶೂಟಿಂಗ್ ಶುರುವಾಗಿದೆ. ವಿಶೇಷ ಎಂದರೇ ಕನ್ನಡ ಒಕ್ಕೂಟ ಶೂಟಿಂಗ್ ವೇಳೆ ಕನ್ನಡಿಗರನ್ನೇ ಬಳಕೆ ಮಾಡಿಕೊಳ್ಳಲು ಮನವಿ ಮಾಡಿತ್ತು. ಸುದೀಪ್ ಅವರು ಕೂಡ ಶೂಟಿಂಗ್‍ಗೆ ಅಗತ್ಯವಿರುವ ತಂತ್ರಜ್ಞರೆಲ್ಲರನ್ನು ಬೆಂಗಳೂರಿಂದಲೇ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಅದರಂತೆ 200 ರಿಂದ 250 ಜನರನ್ನು ಹೈದರಾಬಾದ್‍ಗೆ ಕರೆದುಕೊಂಡು ಬಂದಿದ್ದೇವೆ. ಆ ಮೂಲಕ ನಮ್ಮ ಕೆಲಸಗಾರರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ ಎಂದು ಹೇಳಿದೆ.
ಕೊರೊನಾ ಕಾರಣದಿಂದ ಚಿತ್ರತಂಡ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ತಂತ್ರಜ್ಞರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಚಿತ್ರೀಕರಣದ ಸಮಯದಲ್ಲಿ ಎಲ್ಲರನ್ನು ಪ್ರತಿದಿನ ಪರೀಕ್ಷೆ ನಡೆಸಿಯೇ ಒಳಬಿಡಲಾಗುತ್ತಿದೆ. ಅಲ್ಲದೇ ಒಬ್ಬ ವೈದ್ಯರು ಸೇರಿದಂತೆ ಅಗತ್ಯ ವೈದ್ಯಕೀಯ ವ್ಯವಸ್ಥೆಯನ್ನು ಚಿತ್ರತಂಡ ಮಾಡಿಕೊಂಡಿದೆ.
ಫ್ಯಾಂಟಮ್’ ಕಿಚ್ಚ ಸುದೀಪ್ ಹಾಗೂ ರಂಗಿತರಂಗ ಸಾರಥಿ ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ತಯಾರಾಗ್ತಿರೋ ಮೊದಲ ಸಿನಿಮಾ. ಸಿನಿಮಾ ಟೈಟಲ್ ಹಾಗೂ ಕಿಚ್ಚನ ವಿಕ್ರಾಂತ್ ರೋಣಾ ಪಾತ್ರ ಈಗಾಗಲೇ ಗಾಂಧಿನಗರದಲ್ಲಿ ಸುನಾಮಿ ಎಬ್ಬಿಸಿರುವ ಚಿತ್ರ. ಪೋಸ್ಟರ್ ನಲ್ಲಿ ಕಿಚ್ಚನ ಅರ್ಧ ಫೇಸ್ ನೋಡಿ, ಮೊನಚು ಮೀಸೆ ಮೋಡಿಗೆ ಕಳೆದುಹೋಗಿರುವ ಫ್ಯಾನ್ಸ್, `ವಿಕ್ರಾಂತ್ ರೋಣ’ನ ಖಡಕ್ ಲುಕ್‍ನ ನೋಡೋದಕ್ಕೆ ಕಾಯುತ್ತಿದ್ದಾರೆ.