ಯಾದಗಿರಿ: ಕೊರೊನಾ ದಾಳಿಯಿಂದ ಯಾದಗಿರಿ ಜಿಲ್ಲೆಯ ಜನರು ನಲುಗಿ ಹೋಗಿದ್ರೆ, ಕೊರೊನಾಕ್ಕಿಂತ ನಾನೇನು ಕಮ್ಮಿಯಿಲ್ಲ ಎನ್ನುವಂತೆ ವರುಣರಾಯ ಸತತ ಮೂರು ಗಂಟೆಗಳ ಕಾಲ ಅಬ್ಬರಿಸಿದ್ದಾನೆ. ಮಳೆರಾಯನ ಅಬ್ಬರಕ್ಕೆ ರಸ್ತೆ, ಜಮೀನು ಕೊಚ್ಚಿ ಹೋಗಿವೆ. ಹಳ್ಳಗಳು ತುಂಬಿ ನದಿಯಂತೆ ಹರಿಯುತ್ತಿವೆ. ಜಮೀನಿನಲ್ಲಿ ಮಳೆ ನೀರು ಸಾಗರದಂತೆ ನಿಂತಿವೆ. ರೈತರು ಕೆಲಸ ಮುಗಿಸಿ ಊರಿಗೆ ತೆರಳದಂತಹ ಪರಿಸ್ಥಿತಿ ಯಾದಗಿರಿಯ ವಿವಿಧ ಹಳ್ಳಿಗಳಲ್ಲಿ ನಿರ್ಮಾಣವಾಗಿದೆ. ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯನ್ನು ಸ್ಥಳೀಯರು ಸಕಾಲಕ್ಕೆ ರಕ್ಷಣೆ ಮಾಡಿದ ಘಟನೆ ಯಾದಗಿರಿ ತಾಲೂಕಿನ ಪಗಲಾಪುರ ಗ್ರಾಮದ ಬಳಿ ನಡೆದಿದೆ.
ಪಗಲಾಪುರ ಗ್ರಾಮಕ್ಕೆ ಹತ್ತಿ ಬಿಡಿಸಲು ಕೆಲ ಮಹಿಳೆಯರು ತೆರಳಿ ಮರಳಿ ಮನೆಗೆ ವಾಪಸ್ ಆಗುವ ವೇಳೆ ಈ ಅವಘಡ ಸಂಭವಿಸಿದೆ. ಮಹಿಳೆಯರು ಕೆಲಸ ಮುಗಿಸಿ ಆಟೋದಲ್ಲಿ ಕೂಹಿಲೂರು ಮಾರ್ಗವಾಗಿ ಆಶನಾಳಕ್ಕೆ ತೆರಳುತಿದ್ದರು. ಮಾರ್ಗ ಮಧ್ಯದ ಹಳ್ಳ ತುಂಬಿದ್ದ ಹಿನ್ನೆಲೆಯಲ್ಲಿ ಪಗಲಾಪುರ ಬಳಿ ಆಟೋವನ್ನು ಚಾಲಕ ನಿಲ್ಲಿಸಿದ್ದಾನೆ. ಹೀಗಾಗಿ ಬೇರೆ ವಿಧಿಯಿಲ್ಲದೆ ಮಹಿಳೆಯರು ಗುಂಪಾಗಿ ಹಳ್ಳದಾಟುವಾಗ ಓರ್ವ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕೂಡಲೇ ಸ್ಥಳೀಯರು ಆಕೆಯನ್ನು ಕಾಪಾಡಿದ್ದಾರೆ.
ಯಾದಗಿರಿ ಜಿಲ್ಲೆಯಾದ್ಯಂತ ಮಧ್ಯಾಹ್ನ 2 ರಿಂದ 5 ಗಂಟೆವರೆಗೆ ಬಿಡುವಿಲ್ಲದೆ ಮಳೆ ಸುರಿದಿದ್ದು, ಪರಿಣಾಮ ಜಿಲ್ಲೆಯ ಯಾದಗಿರಿ, ಗುರುಮೀಠಕಲ್, ಶಹಾಪುರ ತಾಲೂಕಿನ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಯಾದಗಿರಿ ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಮಳೆ ರುದ್ರ ನರ್ತನಕ್ಕೆ ಮಳೆ ನೀರು ನದಿಯಂತೆ ಹರಿಯುತ್ತಿವೆ. ಜಮೀನು ಕೆಲಸಕ್ಕೆ ಬಂದಿದ್ದ ರೈತರು ಮರಳಿ ಮನೆಗೆ ತೆರಳಲು ಕೆಲವು ಸಮಯ ಸಾಧ್ಯವಾಗಲಿಲ್ಲ. ಮಹಾಮಳೆಗೆ ಜಮೀನಿನಲ್ಲಿ ನಾಟಿ ಮಾಡಿದ್ದ ಭತ್ತ, ಹತ್ತಿ, ಹೆಸರು ಇತರ ಬೆಳೆಗಳು ಮಳೆ ನೀರಿಗೆ ಕೊಚ್ಚಿಹೋಗಿವೆ. ಜಿಲ್ಲೆಯ ಹಲವೆಡೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ.