ಬೆಂಗಳೂರು: ರಾಜಧಾನಿ ಬೆಂಗಳೂರು ದಿನೇ ದಿನೇ ಭಯಾನಕವಾಗಿ ಮಾರ್ಪಡುತ್ತಿದೆ. ರಾಜ್ಯ ಸರ್ಕಾರದ ಪ್ರಕಾರ ಬೆಂಗಳೂರಲ್ಲಿ ಇರೋದು 23 ಸಾವಿರ ಸೋಂಕಿತರು. ಆದರೆ ರಾಜಧಾನಿಯಲ್ಲಿ ಸೋಂಕಿತರ ಪ್ರಮಾಣ ಬರೋಬ್ಬರಿ 2.23 ಲಕ್ಷ ಮಂದಿ ಇರಬಹುದು ಎಂದು ರಾಜ್ಯ ಕೊರೊನಾ ಕಾರ್ಯಪಡೆಯ ಸದಸ್ಯ ಡಾ.ಗಿರಿಧರ್ ಬಾಬು ಹೇಳುತ್ತಾರೆ.
ರಾಜ್ಯ ಸರ್ಕಾರ ಸೋಂಕು ಹರಡುವಿಕೆ ನಿಯಂತ್ರಿಸಲು ವಿಫಲವಾಗಿರುವ ಕಾರಣ ಹೆಮ್ಮಾರಿ ಮಹಾ ಸ್ಫೋಟ ಆಗಿದ್ದು, ಎಷ್ಟೋ ಮಂದಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿರಬಹುದು. ಹಾಗೆಯೇ ಸೋಂಕು ನಿವಾರಣೆ ಆಗಿರಬಹುದು. ಈ ಬಗ್ಗೆ ಭಯ ಪಡಬೇಕಿಲ.. ಆದರೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಡಾ.ಗಿರಿಧರ್ ಬಾಬು ಸಲಹೆ ನೀಡಿದ್ದಾರೆ. ಸೋಂಕು ವಿಜ್ಞಾನ ಲೆಕ್ಕದ ಆಧಾರದಲ್ಲಿ ಡಾ.ಗಿರಿಧರ್ ಬಾಬು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸೋಂಕು ವಿಜ್ಞಾನ ಲೆಕ್ಕಾಚಾರ: ಜೂನ್ 30ರಿಂದ ಜುಲೈ 13ರವರೆಗೆ 11,136 ಹೊಸ ಪ್ರಕರಣ ಧೃಡವಾಗಿತ್ತು. ಸೋಂಕು ಹರಡುತ್ತಿರುವ ವೇಗ ಪರಿಗಣಿಸಿದರೆ ಇದರ ಪ್ರಮಾಣ 31,978 ಆಗಬೇಕಿತ್ತು. ಆದರೆ ಈ 11,136 ಪ್ರಕರಣಗಳು ಏಳು ದಿನಗಳ ಹಿಂದಿನ ಹೊಸ ಪ್ರಕರಣಗಳಾಗಿವೆ. ತಡವಾಗಿ ಟೆಸ್ಟಿಂಗ್, ರಿಸಲ್ಟ್ ವಿಳಂಬ ಎಲ್ಲವನ್ನು ಪರಿಗಣಿಸಿದರೆ ಏಳು ದಿನಗಳ ಅವಧಿಯಲ್ಲಿ ಬೆಂಗಳೂರಲ್ಲಿ 2.23 ಲಕ್ಷ ಮಂದಿಗೆ ಸೋಂಕು ತಗುಲಿರುತ್ತದೆ.
ಸೋಂಕು ಸ್ಫೋಟಕ್ಕೆ ‘ಸಪ್ತ’ ಕಾರಣ
1. ಸರಿಯಾಗಿ ಕೊರೋನಾ ಟೆಸ್ಟ್ ಮಾಡದಿರುವುದು.
2. ನಾಲ್ಕೈದು ದಿನದ ನಂತರ ಟೆಸ್ಟ್ ರಿಸಲ್ಟ್ ನೀಡುತ್ತಿರುವುದು.
3. ರ‍್ಯಾಂಡಮ್ ಟೆಸ್ಟ್ ಗೆ ಮುಂದಾಗದೇ ವಿಳಂಬ ಮಾಡುತ್ತಿರುವುದು.
4. ಸೋಂಕಿನ ಮೂಲ ಪತ್ತೆ ಹಚ್ಚುವಲ್ಲಿ ವಿಫಲವಾಗುತ್ತಿರುವುದು.
5. ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಇರುವವರ ಪತ್ತೆಗೆ ವಿಳಂಬ.
6. ಕೊರೋನಾ ಟೆಸ್ಟ್ ಗೆ ಒಳಗಾದವರ ಅಡ್ಡಾದಿಡ್ಡಿ ಓಡಾಟ.
7. ಕಮ್ಯುನಿಟಿ ಸ್ಪ್ರೆಡ್ ತಡೆಯುವಲ್ಲಿ ವಿಫಲವಾಗಿರುವುದು.