ಬೆಂಗಳೂರು: ರಾಜ್ಯದ ಕೃಷ್ಣ ಮತ್ತು ಕಾವೇರಿ ಕೊಳ್ಳದ ರೈತರಿಗೆ ಹೆಚ್ಚಿನ ಅನುಕೂಲ ಆಗುವಂತಹ ಯೋಜನೆಗಳನ್ನು ಜಾರಿಗೆ ತರಲು ಉತ್ಸುಕರಾಗಿರುವ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ರಾಜ್ಯಸಭಾ ಸದಸ್ಯ ಭೂಪೇಂದ್ರ ಯಾದವ್ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಮಹತ್ವದ ಬೆಳವಣಿಗೆಯಲ್ಲಿ ಅಸ್ಸಾಂನ ರಾಜಧಾನಿ ಗೌಹಾಟಿಯಲ್ಲಿ ಭೂಪೇಂದ್ರ ಅವರನ್ನು ಭೇಟಿ ಮಾಡಿದ್ದ ಸಚಿವರು, ಬ್ರಹ್ಮಪುತ್ರ ನದಿ ಕಣಿವೆಯ ಇಕ್ಕೆಲಗಳಲ್ಲಿ ವಿಶ್ವದ ಪ್ರತಿಷ್ಠಿತ ಮಲ್‌ಬರಿ ಮತ್ತು ಗೋಲ್ಟನ್ ಮೋಘಾ ಸಿಲ್ಕ್ ರೇಷ್ಮೆ ಬೆಳೆಯುವ ಯೋಜನೆ ರೂಪಿಸುವ ಮೂಲಕ ಅಲ್ಲಿನ ರೈತರಿಗೆ ಆರ್ಥಿಕ ಚೈತನ್ಯ ತುಂಬಿದ್ದರು. ಇದೇ ರೀತಿ ಕರ್ನಾಟಕದ ಕೃಷ್ಣ ಮತ್ತು ಕಾವೇರಿ ಇಕ್ಕೆಲ್ಲಗಳ ರೈತರಿಗೆ ಅನುಕೂಲವಾಗುವಂತಹ ಮಹತ್ವಾಕಾಂಕ್ಷಿ ಯೋಜನೆ ರೂಪಿಸುವ ಸಂಬಂಧ ಉತ್ಸುಕತೆ ತೋರಿದ್ದ ಜಲ ಸಂಪನ್ಮೂಲ ಸಚಿವರಿಗೆ ಕಳೆದ ವಾರ ಬೆಂಗಳೂರಿಗೆ ಆಗಮಿಸಿದ್ದ ರಾಜ್ಯ ಸಭಾ ಸದಸ್ಯ ಭೂಪೆಂದ್ರ ಯಾದವ್ ಅವರು ಆಸ್ಸಾಂಗೆ ಆಗಮಿಸಿ ಯೋಜನೆ ವೀಕ್ಷಿಸುವಂತೆ ಆಹ್ವಾನಿಸಿದ್ದರು.
ಈ ವಿಶೇಷ ಆಹ್ವಾನದ ಮೇರೆಗೆ ಮೂರು ದಿನಗಳ ಅಸ್ಸಾಂ ಪ್ರವಾಸ ಕೈಗೊಂಡಿರುವ ಸಚಿವ ರಮೇಶ್ ಜಾರಕಿಹೊಳಿ ಅವರು ಯೋಜನೆ ಜಾರಿ ಮತ್ತು ಆಗು ಹೋಗುಗಳ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಪರಮಾಪ್ತ ಭೂಪೇಂದ್ರ ಯಾದವ್ ಅವರೊಂದಿಗೆ ಚರ್ಚೆ ನಡೆಸಿದರು. ಈ ಸಂಬಂಧ ಜಲ ಸಂಪನ್ಮೂಲ ಸಚಿವರು ವಿವಿಧ ಯೋಜನಾ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ವೀಕ್ಷಿಸಲಿದ್ದಾರೆ.
ಇದೇ ವೇಳೆ ಸಚಿವ ರಮೇಶ್ ಜಾರಕಿಹೊಳಿ ಅವರು, ಏಳು ಈಶಾನ್ಯ ರಾಜ್ಯಗಳ ಎನ್‌ಡಿಎ ಮುಖ್ಯಸ್ಥ ಹೀಮಂತ್ ಬಿಶ್ವ ಶರ್ಮಾ ಅವರನ್ನೂ ಸಹ ಭೇಟಿ ಮಾಡಿ ಚರ್ಚಿಸುವ ಸಾಧ್ಯತೆಗಳಿವೆ.
Laxmi News 24×7