ಬೆಂಗಳೂರು: ಕೋವಿಡ್ 19 ಸಮಯದಲ್ಲೂ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡಲು ಮುಂದಾಗುತ್ತಿದ್ದ ಬೆಂಗಳೂರಿನ ಕ್ರೈಸ್ಟ್ ಸೇರಿ, ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ರಾಜ್ಯ ಸರ್ಕಾರ ಚಾಟಿ ಬೀಸಿದೆ.
ಅಂತಿಮ ವರ್ಷದ ಪರೀಕ್ಷೆ ಬಿಟ್ಟು ಇನ್ಯಾವುದೇ ತರಗತಿಗಳಿಗೆ ಪರೀಕ್ಷೆ ನಡೆಸದಂತೆ ಕ್ರೈಸ್ಟ್ ವಿಶ್ವವಿದ್ಯಾಲಯ ಸೇರಿ ಎಲ್ಲಾ ಡೀಮ್ಡ್ ವಿವಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಇಂಟರ್ನಲ್ ಅಸಸ್ಮೆಟ್ ಶೇ.50 ಹಾಗೂ ಹಿಂದಿನ ಪರೀಕ್ಷೆಗಳಿಂದ ಶೇ.50 ಅಂಕದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪಾಸ್ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆ ಆದೇಶ ಪ್ರಕಟಿಸಿದೆ.
ಅಂತಿಮ ವರ್ಷ ಬಿಟ್ಟು ಉಳಿದ ಎಲ್ಲ ತರಗತಿಯ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕ್ರೈಸ್ಟ್ ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ಆನ್‌ಲೈನ್ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದು ಭಾರೀ ಟೀಕೆಗೆ ಗುರಿಯಾಗಿತ್ತು.
ಈಗಾಗಲೇ ಅಂತಿಮ ವರ್ಷದ ಪದವಿ ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳಿಗೆ ಯುಜಿಸಿ ಮತ್ತು ರಾಜ್ಯ ಸರ್ಕಾರ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಹೀಗಿದ್ದರೂ ಸ್ವಾಯತ್ತ ಸಂಸ್ಥೆಯಾಗಿರುವ ಕ್ರೈಸ್ಟ್ ವಿಶ್ವವಿದ್ಯಾಲಯ ಕೇಂದ್ರ ಮತ್ತು ರಾಜ್ಯ ಸರ್ಕಾರ ಆದೇಶಗಳನ್ನು ಗಾಳಿಗೆ ತೂರಿ ಪರೀಕ್ಷೆ ನಡೆಸಲು ಮುಂದಾಗಿದ್ದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆನ್‌ಲೈನ್ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಎನ್‌ಎಸ್‌ಯುಐ ವಿದ್ಯಾರ್ಥಿ ಘಟಕದ ನೇತೃತ್ವದಲ್ಲಿ ಸೋಮವಾರ ವಿದ್ಯಾರ್ಥಿಗಳು ಡೈರಿ ವೃತ್ತದಿಂದ ಕಾಲೇಜಿನವರೆಗೂ ಜಾಥಾ ನಡೆಸಿ ಪ್ರತಿಭಟನೆ ನಡೆಸಿದ್ದರು.