ಏರೋಸ್ಪೇಸ್ ಅನ್ಯ ರಾಜ್ಯದ ಪಾಲಾಗಬಾರದು, ಉತ್ತರ ಕರ್ನಾಟಕದಲ್ಲಿ ಪಾರ್ಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಅರವಿಂದ ಬೆಲ್ಲದ ಸಿಎಂಗೆ ಪತ್ರ
ಧಾರವಾಡ- ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಮೀಸಲಿಟ್ಟಿದ್ದ 1,777 ಎಕರೆ ಕೃಷಿ ಭೂಮಿಯ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟು ರೈತರಿಗೆ ನೆರವಾಗುವಂತೆ ತಾವು ಕೈಗೊಂಡ ನಿರ್ಧಾರ ಸ್ವಾಗತಾರ್ಹ. ಈ ಏರೋ ಸ್ಪೇಸ್ ಪಾರ್ಕ ನಿರ್ಮಾಣವನ್ನು ಉತ್ತರ ಕರ್ನಾಟಕದಲ್ಲಿ ಮಾಡಬೇಕು ಎಂದು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಅವರು ಸಿಎಂಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿರೋ ವಿಪಕ್ಷ ಉಪನಾಯಕ ಬೆಲ್ಲದ ಅವರು, ಕರ್ನಾಟದಲ್ಲಿ ಏರೋಸ್ಪೇಸ್ ಪಾರ್ಕ್ ನಿರ್ಮಾಣ ಮಾಡುವುದು ರಾಜ್ಯದ ಆರ್ಥಿಕತೆ ಹಾಗೂ ಹೇರಳವಾಗಿ ಉದ್ಯೋಗ ಸೃಷ್ಟಿಸಲು ಅತ್ಯಂತ ಮಹತ್ವದ್ದಾಗಿದೆ. ಆದರೆ ಭೂ ಸ್ವಾಧೀನಕ್ಕೆ ರೈತರು ವಿರೋಧಿಸಿದ ಕಾರಣ ಉದ್ಯಮ ಸ್ಥಾಪನೆಗೆ ಅಡೆತಡೆ ಎದುರಾಗಿದೆ. ತಾವು ಈ ಪಾರ್ಕ್ ಅನ್ನು ಕರ್ನಾಟಕದಲ್ಲೇ ಸ್ಥಾಪನೆ ಮಾಡಲು ಅಚಲ ನಿರ್ಧಾರ ಹೊಂದಿದ್ದೀರಿ ಎಂಬ ನಂಬಿಕೆಯೂ ಇದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಪಾರ್ಕ್ ಸ್ಥಾಪನೆಗೆ ಕ್ರಮವಹಿಸಬೇಕು ಮನವಿ ಮಾಡಿದ್ದಾರೆ.
ಉತ್ತರ ಕರ್ನಾಟಕ ಮೊದಲಿನಿಂದಲೂ ಬೃಹತ್ ಉದ್ಯಮಗಳ ಸ್ಥಾಪನೆಯಿಂದ ವಂಚಿತವಾಗುತ್ತಲೇ ಬಂದಿದೆ. ಇದು ತಮ್ಮ ಗಮನಕ್ಕೂ ಇದೆ. ಇದೀಗ ಏರೋಸ್ಪೇಸ್ ಪಾರ್ಕ್ ಅನ್ನು ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಅಥವಾ ಉತ್ತರ ಕರ್ನಾಟಕ ಭಾಗದಲ್ಲೇ ಸ್ಥಾಪನೆ ಮಾಡಬೇಕು. ಉದ್ಯಮ ಸ್ಥಾಪನೆಗೆ ಅಗತ್ಯವಾಗಿರುವ ವಿಶಾಲವಾದ ಭೂಮಿ, ಅಗತ್ಯ ಮೂಲ ಸೌಕರ್ಯ, ಕೌಶಲಪೂರ್ಣ ಮಾನವ ಸಂಪನ್ಮೂಲದ ಜತೆಗೆ ಉದ್ಯಮಕ್ಕೆ ಅಗತ್ಯವಾಗಿರುವ ಅನುಕೂಲಕರ ವಾತಾವರಣ ಇದೆ. ಪಾರ್ಕ್ ಸ್ಥಾಪನೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಹೇರಳವಾಗಿ ಉದ್ಯೋಗ ಸೃಷ್ಟಿಯೂ ಮಾಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಏರೋಸ್ಪೇಸ್ ಪಾರ್ಕ್ ಸ್ಥಾಪನೆಯಿಂದ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಹೂಡಿಕೆದಾರರು ಈ ಭಾಗದಲ್ಲಿ ತಮ್ಮ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಒಲವು ತೋರುತ್ತಾರೆ ಇದರಿಂದ ಬಂಡವಾಳ ಹೂಡಿಕೆಯಲ್ಲೂ ಹೆಚ್ಚಳ ಕಾಣಲಿದೆ. ಈ ಪಾರ್ಕ್ ಅನ್ಯ ರಾಜ್ಯಗಳ ಪಾಲಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರಕ್ಕೂ ಇದೆ. ಹೀಗಾಗಿ ಕೂಡಲೇ ಉತ್ತರ ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆ ಮಾಡುವ ಸಾಧ್ಯತೆಯನ್ನು ಪರಿಶೀಲಿಸಲು ಮತ್ತು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ವಿನಂತಿ ಮಾಡಿಕೊಂಡಿದ್ದಾರೆ.
Laxmi News 24×7