ಬೆಳಗಾವಿ/ಚಿಕ್ಕೋಡಿ: ಕೊರೊನಾ ಆತಂಕದ ನಡುವೇ ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದೆ. ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಸಾಧನೆಗೆ ಬಡತನ ಅಡ್ಡಿಯಾಗಬಾರದು ಎಂಬ ಮಾತಿನಂತೆ ಸಾಮಾನ್ಯ ಕೃಷಿ ಜೊತೆಗೆ ತರಕಾರಿ ಮಾರಾಟ ಮಾಡುತ್ತಿರುವ ಕುಟುಂಬದ ವಿದ್ಯಾರ್ಥಿನಿಯೊಬ್ಬಳು ವಿಜ್ಞಾನ ವಿಭಾಗದಲ್ಲಿ ಶೇ.94.5 ಅಂಕಗಳನ್ನ ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ.
ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದ ಕೃಷಿಕ ಅಣ್ಣಪ್ಪ ಭಮ್ಮನ್ನವರ ಪುತ್ರಿ ಅನುಷಾ ಭಮ್ಮನ್ನವರ ಸಾಧನೆ ಮಾಡಿದ್ದಾಳೆ. ಅನುಷಾ ನೀಡಸೊಸಿ ಎಸ್.ಜೆ.ಪಿಎನ್ ಕಾಲೇಜುನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಇಂದು ಹೊರಬಿದ್ದ ಪಿಯುಸಿ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ. 94.5 ಅಂಕಗಳನ್ನು ಪಡೆದು ನೀಡಸೊಸಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಭೌತ ಶಾಸ್ತ್ರದಲ್ಲಿ 99, ಗಣಿತ 98, ರಸಾಯನ ಶಾಸ್ತ್ರದಲ್ಲಿ 93 ಹಾಗೂ ಜೀವ ಶಾಸ್ತ್ರದಲ್ಲಿ 97, ಇಂಗ್ಲೀಷ್ 86 ಹಾಗೂ ಹಿಂದಿ ವಿಷಯದಲ್ಲಿ 94 ಸೇರಿದಂತೆ ಒಟ್ಟು 567 ಅಂಕಗಳನ್ನ ಪಡೆದು ವಿದ್ಯಾರ್ಥಿನಿ ಸಾಧನೆ ಮಾಡಿದ್ದಾಳೆ.
ತಂದೆ ತಾಯಿ ಇಬ್ಬರು ಕೃಷಿಕರಾಗಿದ್ದು, ಕೃಷಿಯ ಜೊತೆಗೆ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಮಗಳನ್ನು ಓದಿಸಿದ್ದರು. ಮಗಳ ಇವತ್ತಿನ ಫಲಿತಾಂಶಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದೆಯು ನಮ್ಮ ಮಗಳು ಯಾವುದೇ ಕ್ಷೇತ್ರದಲ್ಲಿ ಓದಲು ಇಚ್ಚಿಸಿದರು ಅವಳನ್ನು ಓದಿಸುತ್ತೇವೆ ಎಂದು ಅನುಷಾ ಪೋಷಕರು ಹೇಳಿದ್ದಾರೆ.
ನನ್ನ ಸಾಧನೆಗೆ ಕಾಲೇಜಿನ ಎಲ್ಲ ಉಪನ್ಯಾಸಕರು, ತಂದೆ-ತಾಯಿ ಹಾಗೂ ಕುಟುಂಬದ ಎಲ್ಲರ ಸಹಕಾರವೇ ಹೆಚ್ವಿನ ಅಂಕ ಪಡೆಯಲು ಸಹಕಾರಿಯಾಗಿದೆ. ಮುಂದೆ ಎಂಜಿನಿಯರಿಂಗ್ ವಿಭಾಗದಲ್ಲಿ ಸಾಧನೆ ಮಾಡಬೇಕೆಂಬ ಆಸೆ ಇದೆ ಎಂದು ವಿದ್ಯಾರ್ಥಿನಿ ಅನುಷಾ ಖುಷಿಯಿಂದ ತನ್ನ ಮುಂದಿನ ಗುರಿಯ ಬಗ್ಗೆ ತಿಳಿಸಿದ್ದಾರೆ.