ಹುಬ್ಬಳ್ಳಿ : ಕರ್ನಾಟಕದಂತಹ ಕಾಂಗ್ರೆಸ್ ಆಡಳಿತದ ರಾಜ್ಯಗಳು ಎದುರಿಸುತ್ತಿರುವ ಅನಿಶ್ಚಿತ ಆರ್ಥಿಕ ಸ್ಥಿತಿಯಿಂದಾಗಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ನಿರುದ್ಯೋಗ ಸಮಸ್ಯೆಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ವರದಿಗೆ ಸಂಬಂಧಿಸಿದಂತೆ ನಗರದಲ್ಲಿಂದು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
“ರಾಹುಲ್ ಗಾಂಧಿ ಅವರು ತಮ್ಮ ಸಲಹೆಗಾರರು ಹೇಳುವ ಆಧಾರದ ಮೇಲೆ ಪ್ರತಿಕ್ರಿಯೆ ನೀಡುತ್ತಾರೆ. ವಾಸ್ತವವಾಗಿ, ಕೋವಿಡ್ ನಂತರ ಬೇರೆ ಕ್ಷೇತ್ರಗಳಂತೆಯೇ ಉದ್ಯೋಗ ದರವೂ ಹೆಚ್ಚಾಗಿದೆ. ಅದನ್ನು ಇಪಿಎಫ್‌ಒ ಸಂಖ್ಯೆಗಳೇ ತೋರಿಸುತ್ತವೆ” ಎಂದು ಹೇಳಿದರು.
2022 ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ಪ್ರತಿ ತಿಂಗಳು ರೋಜ್‌ಗಾರ್ ಮೇಳ ನಡೆಯುತ್ತಿದ್ದು, ಪ್ರತಿ ತಿಂಗಳು 50 ಸಾವಿರದಿಂದ ಒಂದು ಲಕ್ಷ ಜನರನ್ನು ಸರ್ಕಾರದ ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತಿದೆ. ಇಲ್ಲಿಯವರೆಗೆ ಕಳೆದ ಎರಡೂವರೆ ವರ್ಷಗಳಲ್ಲಿ ಏಳೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ ಎಂದು ಹೇಳಿದ ಕೇಂದ್ರ ಸಚಿವರು, ಸರ್ಕಾರವು ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡಲು ಸಾಧ್ಯವಾಗದ ಕಾರಣ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ ಎಂದು ಹೇಳಿದರು.
‘ಕರ್ನಾಟಕ ಸರ್ಕಾರ ಸೇವೆ ಸಲ್ಲಿಸುತ್ತಿರುವ ತನ್ನ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಸಂಬಳ ಪಾವತಿ ಹತ್ತು ಹದಿನೈದು ದಿನಗಳಿಂದ 20 ದಿನಗಳವರೆಗೆ ವಿಳಂಬವಾಗುತ್ತದೆ. ಅವರ ಆರ್ಥಿಕ ಸ್ಥಿತಿ ಅನಿಶ್ಚಿತವಾಗಿದೆ. ಆದ್ದರಿಂದ ಅವರು ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ’ ಎಂದರು.
‘ಬೇರೆ ಯಾವುದರ ಬಗ್ಗೆ ಮಾತನಾಡುವ ಮೊದಲು, ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡುವಂತೆ ನಾನು ರಾಹುಲ್ ಗಾಂಧಿಯವರಲ್ಲಿ ಹೇಳುತ್ತೇನೆ. ಮೂರು ರಾಜ್ಯಗಳಲ್ಲಿ ಅವರ ಸರ್ಕಾರಗಳಿವೆ ಮತ್ತು ಅವರ ಸ್ಥಿತಿ ತುಂಬಾ ಕೆಟ್ಟದಾಗಿದೆ’ ಕುಟುಕಿದರು.