ಬೆಂಗಳೂರು: ರಾಜ್ಯದ ಪ್ರಮುಖ ರಾಜಕಾರಣಿಗಳ ಪೈಕಿ ಒಬ್ಬರಾದ, ಕಾಲಕ್ಕೆ ತಕ್ಕಂತೆ, ಅಗತ್ಯಕ್ಕೆ ಅನುಗುಣವಾಗಿ, ಕ್ಷಣಾರ್ಧದಲ್ಲಿ ಗುಣಕಾರ ಭಾಗಕಾರ ಹಾಕಿ ಮಾತನಾಡುವ, ಮಾತಿನ ಮಧ್ಯೆ ಹಾಸ್ಯವನ್ನು ಹರಿಬಿಡುವ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಈಗ ರಾಜ್ಯದ ಜನತೆ ಮುಂದೆ ಇನ್ನೊಂದು ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
‘ಕಲರ್ಸ್ ಕನ್ನಡ’ ವಾಹಿನಿಯ ಜನಪ್ರಿಯ ಕಾರ್ಯಕ್ರಮ ‘ಬಿಗ್ ಬಾಸ್’ನಲ್ಲಿ ಭಾಗವಹಿಸುವಂತೆ ‘ಮಾತಿನ ಮಲ್ಲ’ ಹೆಚ್. ವಿಶ್ವನಾಥ್ ಅವರನ್ನು ಆಹ್ವಾನಿಸಲಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.ಬಿಗ್ ಬಾಸ್’ ಕಾರ್ಯಕ್ರಮದ 8ನೇ ಆವೃತ್ತಿಗೆ ಹೆಚ್. ವಿಶ್ವನಾಥ್ ಅವರನ್ನು ಕರತರಲು ಬಿಗ್ ಬಾಸ್ ತಂಡವು ಪ್ರಯತ್ನಿಸುತ್ತಿದ್ದು ಮಾತುಕತೆ ಮುಂದುವರೆದಿದೆ ಎಂಬುದಾಗಿ ತಿಳಿದುಬಂದಿದೆ.
ರಾಜ್ಯ ರಾಜಕಾರಣಿಗಳ ಪೈಕಿ ಹೆಚ್. ವಿಶ್ವನಾಥ್ ಬಹಳ ಭಿನ್ನ. ರಾಜಕೀಯವಾಗಿ ಅವರು ಏನೇ ಆಗಿದ್ದರೂ ಸದಾ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಯಲ್ಲಿ ಇರುತ್ತಾರೆ. ಮಾಧ್ಯಮಗಳಲ್ಲಿ ಎಂದಿಗೂ ಅವರಿಗೆ ‘ಸ್ಪೇಸ್’ ಇದೆ. ಆಗಾಗ ತಮ್ಮ ಬಗ್ಗೆ ಕೇಳಿಬರುವ ಕಟುವಾದ ಟೀಕೆಗಳನ್ನೂ ವಿಶ್ವನಾಥ್ ಲಘುವಾಗಿ ಪರಿಗಣಿಸುತ್ತಾರೆ. ತಿಳಿ ಹಾಸ್ಯವಾಗಿ ಪರಿವರ್ತಿಸುತ್ತಾರೆ. ನಗುನಗುತ್ತಲೇ ರಾಜಕೀಯ ಎದುರಾಳಿಗಳಿಗೆ ಇರಿಯುತ್ತಾರೆ.
ಇಂಥ ‘ಮೋಸ್ಟ್ ಎಂಟರ್ಟೈನರ್’ ರಾಜಕಾರಣಿ ಸಿಕ್ಕರೆ ‘ಬಿಗ್ ಬಾಸ್’ ಬಿಡುವುದೇ?
ಕಳೆದ (7ನೇ) ಆವೃತ್ತಿಯಲ್ಲೇ ಹೆಚ್. ವಿಶ್ವನಾಥ್ ಅವರನ್ನು ಬಿಗ್ ಬಾಸ್ ಮನೆಗೆ ಕರೆತರುವ ಪ್ರಯತ್ನ ಆಗಿತ್ತು. ಬಿಗ್ ಬಾಸ್ ತಂಡ ಭಾರೀ ಪ್ರಯತ್ನ ಪಟ್ಟಿತ್ತು. ಆದರೆ ಆಗ ರಾಜ್ಯ ರಾಜಕೀಯದಲ್ಲಿ ಬಹಳ ಬೆಳವಣಿಗೆಗಳು ಆಗುತ್ತಿದ್ದುದರಿಂದ ಮತ್ತು ಅದರಲ್ಲಿ ವಿಶ್ವನಾಥ್ ಅವರು ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದ ಕಾರಣಕ್ಕೆ ಅದು ಸಾಧ್ಯವಾಗಿರಲಿಲ್ಲ.
7ನೇ ಆವೃತ್ತಿಯಲ್ಲಿ ಆಗದ ಕೆಲಸ 8ನೇ ಆವೃತ್ತಿಯಲ್ಲಾದರೂ ಸಿದ್ಧಿಸಬಹುದೆಂದು ಬಿಗ್ ಬಾಸ್ ತಂಡ ಈಗ ಮತ್ತೆ ವಿಶ್ವನಾಥ್ ಅವರನ್ನು ಸಂಪರ್ಕಿಸಿದೆ. ಬಿಗ್ ಬಾಸ್ 8ನೇ ಆವೃತ್ತಿಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದೆ. 2021ರ ಫೆಬ್ರವರಿಗೆ ಬಿಗ್ ಬಾಸ್ 8ನೇ ಆವೃತ್ತಿ ಶುರುವಾಗಲಿದ್ದು ‘ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ವಿಶ್ವನಾಥ್ ಪ್ರತಿಕ್ರಿಯಿಸಿರುವುದಾಗಿ ತಿಳಿದುಬಂದಿದೆ.