ನವದೆಹಲಿ: ಕೇಂದ್ರ ಒಪ್ತಿಲ್ಲ – ರೈತರು ಪಟ್ಟು ಸಡಿಲಿಸ್ತಿಲ್ಲ. ಕೇಂದ್ರ ಕಳಿಸಿದ ಲಿಖಿತ ಭರವಸೆಯನ್ನು ಕೂಡ ರೈತರು ಒಪ್ಪಿಲ್ಲ. ಪರಿಣಾಮ, ಸತತ 14ನೇ ದಿನವೂ ದೆಹಲಿ ಹೊರ ವಲಯದಲ್ಲಿ ಅನ್ನದಾತರ ಪ್ರತಿಭಟನೆ ಮುಂದುವರಿದಿದೆ.
ಮಂಗಳವಾರ ರಾತ್ರಿ ಅಮಿತ್ ಶಾ ಜೊತೆಗಿನ ಸಂಧಾನ ಸಭೆ ವಿಫಲವಾದ ಬಳಿಕ ಇವತ್ತಿನ ಸಭೆ ರದ್ದು ಮಾಡಿದ ಕೇಂದ್ರ ಸರ್ಕಾರ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಇರುತ್ತೆ ಎಂಬ ಭರವಸೆ ಸೇರಿ ಹಲವು ತಿದ್ದುಪಡಿಗಳಿಗೆ ಸಮ್ಮತಿ ಸೂಚಿಸಿ ಲಿಖಿತ ಪ್ರಸ್ತಾವನೆಯನ್ನು ಧರಣ ನಿರತ ಅನ್ನದಾತರ ಬಳಿಗೆ ಕಳಿಸಿತ್ತು. ಆದರೆ ಅನ್ನದಾತರು ಮಾತ್ರ ಇದನ್ನು ಒಪ್ಪೋಕೆ ರೆಡಿ ಇಲ್ಲ. ಸಿಂಘು ಗಡಿಯಲ್ಲಿ ಇಂದು ಸಭೆ ಸೇರಿದ್ದ ರೈತರು, ತಮ್ಮ ಹಳೆಯ ನಿಲುವಿಗೆ ಅಂಟಿಕೊಂಡಿರಲು ತೀರ್ಮಾನಿಸಿದ್ದಾರೆ.
ಸಭೆಯ ಬಳಿಕ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡೋವರೆಗೂ ಹೋರಾಟದಿಂದ ವಿರಮಿಸಲ್ಲ ಎಂದು ಘೋಷಿಸಿದ್ದಾರೆ. ಸೋಮವಾರ ದೆಹಲಿಯಲ್ಲಿ ದೊಡ್ಡಮಟ್ಟದ ಸಮಾವೇಶ, ಡಿಸೆಂಬರ್ 12ರವರೆಗೂ ಜೈಪುರ-ದೆಹಲಿ, ಆಗ್ರಾ-ದೆಹಲಿ ಹೈವೇ ತಡೆ ನಡೆಸೋದಾಗಿ ಎಚ್ಚರಿಸಿದ್ದಾರೆ. ದೇಶಾದ್ಯಂತ ಎಲ್ಲಾ ಟೋಲ್‍ಗಳ ಬಳಿ ಪ್ರತಿಭಟನೆ ನಡೆಸುವುದಾಗಿಯೂ ತಿಳಿಸಿದ್ದಾರೆ.
ಡಿಸೆಂಬರ್ 13ರಿಂದ ಬಿಜೆಪಿ ನಾಯಕರಿಗೆ ಕಂಡಕಂಡಲ್ಲಿ ಘೇರಾವ್ ಹಾಕೋದಾಗಿ ರೈತರು ಪ್ರಕಟಿಸಿದ್ದು, ಡಿಸೆಂಬರ್ 14ರಂದು ದೇಶಾದ್ಯಂತ ಚಳವಳಿ ನಡೆಡುವ ಸಂದೇಶವನ್ನ ಕೇಂದ್ರಕ್ಕೆ ರವಾನಿಸಿದ್ದಾರೆ. ಕೇಂದ್ರ ಸರ್ಕಾರ ತಮ್ಮ ಬೇಡಿಕೆಗೆ ಒಪ್ಪಿದ್ರೇ ನಾಳೆಯೇ ಕೇಂದ್ರದ ಜೊತೆ ಮಾತುಕತೆ ಸಿದ್ಧ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ, ಸಂಜೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ವಿಪಕ್ಷ ನಿಯೋಗ, ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಮನವಿ ಪತ್ರ ಸಲ್ಲಿಸಿದ್ರು. ರಾಹುಲ್ ಗಾಂಧಿ, ಶರದ್ ಪವಾರ್ ಸೇರಿ ಹಲವರು ಈ ವೇಳೆ ಉಪಸ್ಥಿತರಿದ್ದರು.