ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ನಾಳೆ ರಾತ್ರಿಯಿಂದ ಒಂದು ವಾರದ ಮಟ್ಟಿಗೆ ಬೆಂಗಳೂರು ಅರ್ಧಂಬಂಧ ಲಾಕ್‍ಡೌನ್ ಆಗುತ್ತಿದೆ. ಆದರೆ ಜಿಲ್ಲೆಗಳನ್ನು ಲಾಕ್‍ಡೌನ್ ಮಾಡೋ ವಿಚಾರವಾಗಿ ಸರ್ಕಾರ ದೊಡ್ಡ ಗೊಂದಲ ಸೃಷ್ಟಿಸಿದೆ.
ಹೈರಿಸ್ಕ್ ಜಿಲ್ಲೆಗಳಲ್ಲಿ ಲಾಕ್‍ಡೌನ್ ಜಾರಿ ಮಾಡೋ ಸಂಬಂಧ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಿಎಂ ಯಡಿಯೂರಪ್ಪ ಹಿಂದೇಟು ಹಾಕಿದ್ರಾ ಎನ್ನುವ ಪ್ರಶ್ನೆ ಎದ್ದಿದೆ. ಬೆಂಗಳೂರು ಲಾಕ್‍ಡೌನ್ ವಿಚಾರದಲ್ಲಿ ಖಡಕ್ ನಿರ್ಣಯ ತೆಗೆದುಕೊಂಡ ಸಿಎಂ, ಜಿಲ್ಲೆಗಳ ಹೊಣೆಯನ್ನು ಉಸ್ತುವಾರಿ ಸಚಿವರು, ಡಿಸಿಗಳ ಮೇಲೆ ಹಾಕಿ ಸುಮ್ಮನಾಗಿದ್ದಾರೆ. ಡಿಸಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಿಎಂ, ಆರಂಭದಲ್ಲೇ ಲಾಕ್‍ಡೌನ್ ಮಾಡಿ ಎಂದು ನಾನು ಯಾರಿಗೂ ಸೂಚಿಸಲ್ಲ. ಲಾಕ್‍ಡೌನ್‍ನಿಂದ ಸಮಸ್ಯೆಗೆ ಪರಿಹಾರ ಸಿಗುತ್ತೆ ಅಂತಾ ನನಗೇನೂ ಅನಿಸಲ್ಲ. ಜಿಲ್ಲಾಧಿಕಾರಿಗಳು ತಮಗೆ ಸರಿ ಅನಿಸಿದ್ದನ್ನು ಮಾಡಬಹುದು ಎಂದು ಸ್ಪಷ್ಪಪಡಿಸಿದರು ಎಂದು ತಿಳಿದು ಬಂದಿದೆ.
ಟಾಸ್ಕ್ ಫೋರ್ಸ್ ಸಭೆಯಲ್ಲಿ ಜಿಲ್ಲೆಗಳ ಲಾಕ್‍ಡೌನ್ ವಿಚಾರದಲ್ಲಿ ಸರ್ಕಾರವೇ ಏಕರೂಪದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಯನ್ನು ಸಚಿವರು ಒತ್ತಾಯಿಸಿದರಂತೆ. ಡಿಸಿಗಳ ವಿವೇಚನೆಗೆ ಬಿಟ್ರೆ ಗೊಂದಲ ಆಗಬಹುದು. ನೀವೇ ಇಡಿ ರಾಜ್ಯವನ್ನು ಲಾಕ್‍ಡೌನ್ ಮಾಡಿಬಿಡಿ ಅಂತಾ ಯಡಿಯೂರಪ್ಪಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ ಆರ್ಥಿಕತೆ ದೃಷ್ಟಿಯಿಂದ ಇಡೀ ರಾಜ್ಯ ಲಾಕ್‍ಡೌನ್ ಮಾಡೋಕೆ ಸಿಎಂ ಸಿದ್ಧರಿಲ್ಲ ಎನ್ನಲಾಗಿದೆ. ನಂತರ ಹೈರಿಸ್ಕ್ ಅಲ್ಲದ ಡಿಸಿಗಳ ಜೊತೆಯೂ ಸಿಎಂ ಸಭೆ ನಡೆಸಿದರು. ಬಹುತೇಕ ಡಿಸಿಗಳು ಲಾಕ್‍ಡೌನ್ ಬೇಡ ಎಂಬ ಅಭಿಪ್ರಾಯ ಮಂಡಿಸಿದ್ರು. ಹೀಗಾಗಿ ಡಿಸಿಗಳ ಅಭಿಪ್ರಾಯಕ್ಕೆ ಸಿಎಂ ಮಣೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾವ್ಯಾವ ಜಿಲ್ಲೆಗಳು ಲಾಕ್‍ಡೌನ್ ?
1. ಮಂಗಳೂರು-ಗುರುವಾರದಿಂದ ಒಂದು ವಾರ ಲಾಕ್‍ಡೌನ್
2. ಧಾರವಾಡ-10 ದಿನ ಲಾಕ್‍ಡೌನ್. ಬುಧವಾರ ಸಂಜೆಯಿಂದ ಜಾರಿ, ಜುಲೈ 24ರವರೆಗೂ ಲಾಕ್
3. ಬೆಳಗಾವಿ -ಅಥಣಿ, ಕಾಗವಾಡ, ನಿಪ್ಪಾಣಿ, ಚಿಕ್ಕೋಡಿ ತಾಲೂಕಿನಲ್ಲಿ ಸೆಲ್ಫ್ ಲಾಕ್‍ಡೌನ್
4. ರಾಯಚೂರು – ರಾಯಚೂರು, ಸಿಂಧನೂರಿನಲ್ಲಿ ಜುಲೈ 15ರಿಂದ 22ರವರೆಗೂ ಒಂದು ವಾರ ಲಾಕ್‍ಡೌನ್
5. ಹಾವೇರಿ- ಬುಧವಾರದಿಂದ ರಾಣೇಬೆನ್ನೂರು ಮತ್ತು ಶಿಗ್ಗಾಂವಿ ತಾಲೂಕು ಐದು ದಿನ ಲಾಕ್‍ಡೌನ್
6. ಉಡುಪಿ- ಲಾಕ್‍ಡೌನ್ ಆಗಲ್ಲ ಆದ್ರೆ ಜಿಲ್ಲಾ ಗಡಿಗಳು ಬಂದ್.
7. ಮೈಸೂರು- ಲಾಕ್‍ಡೌನ್ ಇಲ್ಲ, ಟೆಸ್ಟಿಂಗ್ ಹೆಚ್ಚಳಕ್ಕೆ ಕ್ರಮ
8. ಕಲಬುರಗಿ, ಬೀದರ್ – ಲಾಕ್‍ಡೌನ್ ಮಾಡುವ ಬಗ್ಗೆ ಚರ್ಚೆ
9. ಬಳ್ಳಾರಿ, ವಿಜಯಪುರ, ಉತ್ತರ ಕನ್ನಡ, ಮಂಡ್ಯ – ಲಾಕ್‍ಡೌನ್ ಆಗಲ್ಲ