ಚಿಕ್ಕೋಡಿ: ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಚಿಕ್ಕೋಡಿ ಪಟ್ಟಣವನ್ನು ಸೋಮವಾರದಿಂದ ಜು. 20ರವರೆಗೆ ಲಾಕ್‍ಡೌನ್ ಮಾಡಲಾಗಿದೆ. ಆದರೆ ಲಾಕ್‍ಡೌನ್‍ಗೆ ಜನರಿಂದ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಲಾಕ್‍ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳಿಗೆ ರಾಜ್ಯ ಸರ್ಕಾರ ರಿಯಾಯತಿ ನೀಡಿದೆ. ಆದರೆ ಚಿಕ್ಕೋಡಿ ಪಟ್ಟಣದಲ್ಲಿ ಜು.13 ರಿಂದ 20ರವರೆಗೆ ಅಂಗಡಿಕಾರರು ಸ್ವಯಂ ಪ್ರೇರಿತ ಲಾಕ್‍ಡೌನ್ ಘೋಷಣೆ ಮಾಡಿ ಸೋಮವಾರ ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಿದ್ದಾರೆ.
ಲಾಕ್‍ಡೌನ್ ಆರಂಭಿಸಿದ್ದರಿಂದ ಪಟ್ಟಣದಲ್ಲಿ ಔಷಧಿ ಅಂಗಡಿಗಳು ಮುಚ್ಚಿಕೊಂಡಿದ್ದರಿಂದ ಗ್ರಾಮೀಣ ಪ್ರದೇಶದಿಂದ ಬಂದಿರುವ ರೋಗಿಗಳು ಔಷಧಿ ದೊರೆಯದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪಟ್ಟಣದಲ್ಲಿ ಮಧ್ಯಾಹ್ನ 3 ಗಂಟೆಯವರೆಗೂ ಎಲ್ಲ ಔಷಧಿಗಳನ್ನು ಮುಚ್ಚಲಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆದೇಶವನ್ನು ಗಾಳಿಗೆ ತೂರಿದ ತಾಲೂಕಾ ಆಡಳಿತ ಔಷಧಿ ಅಂಗಡಿಗಳನ್ನು ಬಂದ ಮಾಡಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
ಸಾರ್ವಜನಿಕರು ತಹಸೀಲ್ದಾರ್ ಎಸ್.ಎಸ್.ಸಂಪಗಾಂವಿಯವರಿಗೆ ದೂರವಾಣಿ ಕರೆ ಮಾಡಿ ಅಗತ್ಯ ವಸ್ತುಗಳಲ್ಲಿ ಬರುವ ಔಷಧಿ ಅಂಗಡಿಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿದಾಗ ಮಧ್ಯಾಹ್ನದ ನಂತರ ಪಟ್ಟಣದಲ್ಲಿ ಔಷದಿ ಅಂಗಡಿಗಳನ್ನು ಪ್ರಾರಂಭಿಸಿದರು.
ಪಟ್ಟಣದಲ್ಲಿ ಅಂಗಡಿಕಾರರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿಮುಗ್ಗಟ್ಟುಗಳನ್ನು ಮುಚ್ಚಿಕೊಂಡಿದ್ದರು. ಆದರೆ ಬೈಕ್ ಸವಾರರು ಮಾತ್ರ ಬೇಕಾಬಿಟ್ಟು ಓಡಾಡುತ್ತಿರುವುದು ಕಂಡು ಬಂತು. ಬಸ್ ಸಂಚಾರವು ವಿರಳವಾಗಿತ್ತು. ಸರ್ಕಾರಿ ಕಚೇರಿಗಳು, ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಎಂದಿನಂತೆ ಆರಂಭವಿದ್ದವು.