ಹುಬ್ಬಳ್ಳಿ: ದೀಪಾವಳಿ ಹಬ್ಬವೆಂದರೆ ಎಲ್ಲೆಡೆ ಸಡಗರ. ಹಬ್ಬದಲ್ಲಿ ದೀಪಗಳಿಗೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವವನ್ನು ಜನರು ಪಟಾಕಿಗಳಿಗೂ ನೀಡುತ್ತಾರೆ. ಪಟಾಕಿಗಳೆಂದರೆ ಮಕ್ಕಳಿಂದ ಹಿಡಿದು ಎಲ್ಲರಿಗೂ ಅಚ್ಚುಮೆಚ್ಚು. ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಲ್ಲದೆ, ಅ.31ರಿಂದ ನ.2ರವರೆಗೆ ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಪಟಾಕಿಗಳನ್ನು ಹಾರಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದೆ.
ಪಟಾಕಿ ಹಚ್ಚಿದಾಗ ಬರುವ ಶಬ್ದ, ವಿವಿಧ ಬಣ್ಣ, ಚಿತ್ತಾರ ಎಲ್ಲರಿಗೂ ಖುಷಿ ನೀಡುತ್ತದೆ. ಅದರಿಂದ ಬರುವ ಹೊಗೆ, ಹೆಚ್ಚು ಶಬ್ದ ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಸಿರು ಪಟಾಕಿಗಳು ಕಡಿಮೆ ಶಬ್ದ, ಕಡಿಮೆ ಹೊಗೆ ಹೊರಸೂಸುತ್ತವೆ. ಹೀಗಾಗಿ ಇವುಗಳನ್ನು ಹೆಚ್ಚು ಬಳಸಬೇಕು ಎನ್ನುತ್ತಾರೆ ಅಧಿಕಾರಿಗಳು.
ಸಾಂಪ್ರದಾಯಿಕ ಪಟಾಕಿಗಳಲ್ಲಿ ಲಿಥೀಯಂ, ಬೇರಿಯಂನಂತಹ ರಾಸಾಯನಿಕ ಅಂಶ ಹೆಚ್ಚಾಗಿರುತ್ತದೆ. ಹಸಿರು ಪಟಾಕಿಗಳಲ್ಲಿ ಇವುಗಳ ಬಳಕೆ ತೀರಾ ಕಡಿಮೆ. ಹೀಗಾಗಿಯೇ ಈ ಪಟಾಕಿಗಳಿಂದ ಸಾಂಪ್ರದಾಯಿಕ ಪಟಾಕಿಗಳಿಗಿಂತ ಶೇ 30ರಷ್ಟು ಕಡಿಮೆ ಮಾಲಿನ್ಯವಾಗುತ್ತದೆ. ಸಾಂಪ್ರದಾಯಿಕ ಪಟಾಕಿಗಳ ಶಬ್ದ 160 ರಿಂದ 200 ಡೆಸಿಬಲ್ ಇದ್ದರೆ, ಹಸಿರು ಪಟಾಕಿಗಳ ಶಬ್ದ 100ರಿಂದ 130 ಡೆಸಿಬಲ್ ಇರುತ್ತದೆ.
ಹಸಿರು ಪಟಾಕಿ ಹೊರತುಪಡಿಸಿ ಉಳಿದ ಪಟಾಕಿಗಳ ಮಾರಾಟ ತಡೆಯಲು ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾನಗರ ಪಾಲಿಕೆಯ ಪರಿಸರ ಎಂಜಿನಿಯರ್ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ನಿಗಾ ವಹಿಸಲಿದೆ. ಬೇರೆ ಪಟಾಕಿ ಮಾರಾಟ ಮಾಡುವುದು ಕಂಡುಬಂದರೆ ಅವರಿಗೆ ದಂಡ ವಿಧಿಸುವುದು, ವ್ಯಾಪಾರ ಪರವಾನಗಿ ರದ್ದು ಮಾಡುವ ಕೆಲಸವನ್ನೂ ಅಧಿಕಾರಿಗಳು ಮಾಡಲಿದ್ದಾರೆ.