ಧಾರವಾಡ: ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಬಿ.ಜಿ.ರಮಾ ತಿಳಿಸಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು.
ಪೊಲೀಸರಿಗೆ ಕಾರ್ಯದ ಒತ್ತಡ ಇರುತ್ತದೆ. ಪೊಲೀಸರು ತಮ್ಮ ಮತ್ತು ಕುಟುಂಬದ ಆರೋಗ್ಯ ತಮ್ಮ ಆರೋಗ್ಯದ ಕಡೆಗೂ ಗಮನಹರಿಸಬೇಕು ಎಂದರು.
ಪೊಲೀಸರು ಹಗಲಿರುಗಳು ಕಾರ್ಯನಿರ್ವಹಿಸುತ್ತಾರೆ. ಸಮಾಜದ ಆಂತರಿಕ ಭದ್ರತೆಗೆ ಶ್ರಮಿಸುತ್ತಾರೆ. ಪೊಲೀಸರು ಸಾರ್ವಜನಿಕರ ಜತೆ ಉತ್ತಮ ನಡೆವಳಿಕೆ ಅವರ ವಿಶ್ವಾಸ ಗಳಿಸುವುದರಿಂದ ಅಪರಾಧಗಳನ್ನು ನಿಯಂತ್ರಿಸಲು ಮತ್ತು ಅಪರಾಧಿಗಳನ್ನು ಪತ್ತೆ ಹೆಚ್ಚಲು ಸಹಾಯವಾಗುತ್ತದೆ ಎಂದರು.
ಐಐಟಿ ಪ್ರೊ.ಎಸ್.ಎಂ.ಶಿವಪ್ರಸಾದ ಮಾತನಾಡಿ, ಪೊಲೀಸರು ರಾಷ್ಟ್ರದೊಳಗಿನ ದುಷ್ಟಶಕ್ತಿಗಳನ್ನು ಮಟ್ಟಹಾಕಿ, ಆಂತರಿಕ ಭದ್ರತೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಹುತಾತ್ಮ ಪೊಲೀಸರನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಬರಮನಿ ವೇದಿಕೆಯಲ್ಲಿ ಇದ್ದರು.
ಹುತಾತ್ಮ ಯೋಧ ಹುಚ್ಚೇಶ ಹನುಮಂತಪ್ಪ ಮಲ್ಲನ್ನವರ ತಂದೆ ಹನುಮಂತಪ್ಪ, ಕುಟುಂಬದವರು, ಹಾಗೂ ಹುತಾತ್ಮರಾದ ಪೊಲೀಸರ ಕುಟುಂಬ ಸದಸ್ಯರು ಹುತಾತ್ಮ ಪೊಲೀಸರಿಗೆ ನಮನ ಸಲ್ಲಿಸಿದರು.