ಹುಕ್ಕೇರಿ: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಹರಗಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗುಡ್ಡ ಕುಸಿತದ ಸ್ಥಳಕ್ಕೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ ಭೇಟಿ ನೀಡಿ ಪರಿಶೀಲಿಸಿದರು.
‘ಕಲ್ಲುಗಳು ಉರುಳಿ ಬಿದ್ದು, ವಸತಿ ಪ್ರದೇಶದ ಸಮೀಪ ಬಂದು ನಿಂತಿವೆ. ಯಾವುದೇ ಪ್ರಾಣಹಾನಿ ಅಥವಾ ಮನೆಗೆ ತೊಂದರೆ ಆಗಿಲ್ಲ. ಆದರೆ ಕಲ್ಲು ಬಿದ್ದ ಹೊಡೆತಕ್ಕೆ ಚರಂಡಿ ರಿಪೇರಿಗೆ ಬಂದಿವೆ’ ಎಂದು ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಅಧ್ಯಕ್ಷ ಪವನ್ ಪಾಟೀಲ್ ತಿಳಿಸಿದರು.
‘ಗುಡ್ಡದ ಸುತ್ತ ಸುಮಾರು ನಾಲ್ಕು ನೂರು ಮನೆಗಳಿದ್ದು, ಇನ್ನೂ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದುರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಸುತ್ತಮುತ್ತಲಿನ ಜನರನ್ನು ಕಾಳಜಿ ಕೇಂದ್ರಕ್ಕೆ ಅಥವಾ ಸುರಕ್ಷಿತ ಪ್ರದೇಶಕ್ಕೆ ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಬೇಕು’ ಇಒ ಪ್ರವೀಣ ಕಟ್ಟಿ ಸೂಚಿಸಿದರು.
ಹಳೆ ಮನೆಯಲ್ಲಿ ಅಥವಾ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಡಂಗುರ ಸಾರಲು ಸೂಚಿಸಲಾಯಿತು.