ಬೆಳಗಾವಿ: ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಘಟಪ್ರಭಾ ನದಿ ಮೂಲಕ ಹಿಡಕಲ್ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಿಡಕಲ್ ಜಲಾಶಯದಲ್ಲಿರುವ 148 ಅಡಿ ಎತ್ತರದ ಶ್ರೀ ವಿಠಲ ಮಂದಿರ ಸಂಪೂರ್ಣ ಮುಳುಗಡೆಯಾಗಿದೆ.
ಸಾವಂತವಾಡಿ, ಅಂಬೋಲಿ ಅರಣ್ಯ ಪ್ರದೇಶದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿರುವುದರಿಂದ ಘಟಪ್ರಭಾ ನದಿ ಮೂಲಕ ಹಿಡಕಲ್ ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿರುವ ಶ್ರೀ ವಿಠಲ ಮಂದಿರ ಸಂಪೂರ್ಣ ಜಲಾವೃತಗೊಂಡಿದ್ದು, ಕಳೆದ 15 ದಿನಗಳಿಂದ ದರ್ಶನಕ್ಕೆ ಲಭ್ಯವಿದ್ದ ಮಂದಿರ ಈಗ ನೀರಿನಲ್ಲಿ ಮುಳುಗಿ ಕೇವಲ ಕಳಶ ಮಾತ್ರ ಕಾಣುತ್ತಿದೆ.
2175 ಅಡಿ ಸಾಮರ್ಥ್ಯದ ಹಿಡಕಲ್ ಜಲಾಶಯ 2128 ಅಡಿ ನೀರು ತುಂಬಿದ್ದು, 24 ಗಂಟೆಗಳ ಅವಧಿಯಲ್ಲಿ ಜಲಾಶಯ ಮಟ್ಟದಲ್ಲಿ ಐದು ಅಡಿ ನೀರು ಹೆಚ್ಚಳವಾಗಿದೆ. ಖಾನಾಪುರ ತಾಲೂಕಿನಲ್ಲಿ ಕಣಕುಂಬಿ ಹಾಗೂ ಜಾಂಬೋಟಿ ಅರಣ್ಯ ಪ್ರದೇಶದಲ್ಲೂ ಧಾರಾಕಾರ ಮಳೆ ಆಗುತ್ತಿರುವುದರಿಂದ ಮಲಪ್ರಭಾ ನದಿ ಮೂಲಕ 8504 ಕ್ಯೂಸೆಕ್ ನೀರು ಒಳಹರಿವು ಬರುತ್ತಿದೆ.