ರಾಮದುರ್ಗ: ತಾಲ್ಲೂಕಿನ ಕಡೇ ಗ್ರಾಮ ನಂದಿಹಾಳಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯೇ ಹದಗೆಟ್ಟಿದೆ. ಇಲ್ಲಿನ ಜನರು ಪಕ್ಕದ ಕಲಾದಗಿ, ಕಾಡರಕೊಪ್ಪ, ಲೋಕಾಪುರಕ್ಕೆ ತೆರಳಲು ನಿತ್ಯ ಯಾತನೆ ಅನುಭವಿಸುವಂತಾಗಿದೆ.
ನಂದಿಹಾಳದಿಂದ ಅಕ್ಕಪಕ್ಕದ ಗ್ರಾಮಗಳು ಮತ್ತು ಹೊಲಗಳಿಗೆ ತೆರಳಲು ಇರುವುದು ಇದೊಂದೇ ರಸ್ತೆ.
ಆದರೆ, ಜಿಟಿಜಿಟಿ ಮಳೆಯಾದರೂ ಅದು ಕೆಸರುಮಯವಾಗಿ ಮಾರ್ಪಡುತ್ತದೆ. ಅಪಾರ ಪ್ರಮಾಣದಲ್ಲಿ ಮಳೆನೀರು ರಸ್ತೆ ಮೇಲೆಯೇ ಸಂಗ್ರಹವಾಗುತ್ತದೆ. ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಹೈರಾಣಾಗಿದ್ದಾರೆ.
ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡದ ರಸ್ತೆ ನಿರ್ಮಾಣಕ್ಕೆ ಜಿಲ್ಲಾ ಪಂಚಾಯ್ತಿ ಅಥವಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಇದರಿಂದ ಗ್ರಾಮಸ್ಥರು ಗೋಳಾಡುತ್ತಿದ್ದಾರೆ.
‘ಹೊಲಕ್ಕೆ ಕಾಲ್ನಡಿಗೆ ಮೂಲಕ ಹೋಗುವ ಮಹಿಳೆಯರು, ವೃದ್ಧರು ಈ ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡೇ ಸಾಗಬೇಕು. ಕೆಲವರು ಕಾಲು ಜಾರಿಬಿದ್ದು ಪೆಟ್ಟು ತಿಂದಿರುವ ಉದಾಹರಣೆಗಳು ಸಾಕಷ್ಟಿವೆ. ಈ ರಸ್ತೆಯಲ್ಲಿ ಡಾಂಬರ್ ಹಾಕಿದರೂ ಪ್ರಯೋಜನ ಇಲ್ಲ. ಇಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಬೇಕಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.