ಮಂಡ್ಯ: ಕೌಟುಂಬಿಕ ಕಲಹಕ್ಕೆ ವ್ಯಕ್ತಿಯೊಬ್ಬನನ್ನು ಆತನ ಪತ್ನಿ ಹಾಗೂ ಮಗ ಸೇರಿ ಕೊಲೆ ಮಾಡಿರುವ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. ಮದ್ದೂರು ತಾಲೂಕು ಬೆಸಗರಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯ ಚಾಪುರದೊಡ್ಡಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿ ಉಮೇಶ್ (50) ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹಲವು ದಿನಗಳಿಂದಲೂ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗುತ್ತಿದೆ. ಈಗಾಗಲೇ ಕಳೆದ ಐದಾರು ತಿಂಗಳ ಹಿಂದೆ ಗಂಡ ಹೆಂಡತಿ ನಡುವೆ ಜಗಳ ನಡೆದು ಪತ್ನಿ ಸವಿತಾ ಹಾಗೂ ಮಗ ಶಶಾಂಕ್ ಸೇರಿ ಉಮೇಶ್ ಅವರ ಕಾಲಿಗೆ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಸಂಬಂಧಿಕರ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು. ಆದರೆ, ಚಾಪುರದೊಡ್ಡಿ ಗ್ರಾಮದಲ್ಲಿ ಶನಿವಾರ ಪಿತೃಪಕ್ಷ ಇರುವುದರಿಂದ ಪೂಜೆ ಪುರಸ್ಕಾರಗಳಲ್ಲಿ ಭಾಗಿಯಾಗಲು ಗುರುವಾರ ಉಮೇಶ್ ಬಂದಿದ್ದರು. ಈ ವೇಳೆ ಮತ್ತೆ ಪತ್ನಿ ಸವಿತಾ ಹಾಗೂ ಮಗ ಶಶಾಂಕ್ ಅವರೊಂದಿಗೆ ಜಗಳ ನಡೆದು ದೊಣ್ಣೆ ಹಾಗೂ ಮಚ್ಚುಗಳಿಂದ ಇಬ್ಬರು ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮಚ್ಚುಗಳಿಂದಾದ ತೀವ್ರ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಉಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Laxmi News 24×7