ಬೆಳಗಾವಿ: ಗಡಿ, ಭಾಷೆಯ ಹೆಸರಿನಲ್ಲಿ ನಡೆಯುವ ಹಲವು ವಿವಾದಗಳ ಮಧ್ಯೆ ಬೆಳಗಾವಿ ಹಬ್ಬಗಳ ವಿಚಾರದಲ್ಲಿ ಸೌಹಾರ್ದತೆ ಮೆರೆಯುತ್ತಾ ಬಂದಿದೆ. ಇದಕ್ಕೆ ಹೊಸ ಉದಾಹರಣೆಯೆಂಬಂತೆ, ಈ ಬಾರಿ ಎಲ್ಲ ಧರ್ಮ, ಭಾಷೆಯವರು ಒಂದಾಗಿ ಗಣೇಶೋತ್ಸವ ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಗಣೇಶ ನಿಮಜ್ಜನೆ ಮೆರವಣಿಗೆಗೆ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಮುಂದೂಡಿದ್ದಾರೆ.
119 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ವೈಭವದ ಗಣೇಶೋತ್ಸವಕ್ಕೆ ಕುಂದಾನಗರಿ ಖ್ಯಾತಿಯ ಬೆಳಗಾವಿ ಸಜ್ಜಾಗಿದೆ. ವಿಘ್ನ ನಿವಾರಕನನ್ನು ಶ್ರದ್ಧಾ-ಭಕ್ತಿಯಿಂದ ಬರಮಾಡಿಕೊಂಡು, ಸಂತಸದಿಂದ ಚೌತಿ ಆಚರಿಸಲು ಜನತೆ ಉತ್ಸುಕರಾಗಿದ್ದಾರೆ. ಕಳೆದೆರಡು ವರ್ಷ ಚೌತಿ ಮೇಲೆ ಕೋವಿಡ್-19 ನಿರ್ಬಂಧಗಳಿದ್ದವು. ಇದೀಗ ಕೊರೊನಾ ಉಪಟಳವಿಲ್ಲ. ಹೀಗಾಗಿ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ.
ಸೆಪ್ಟೆಂಬರ್ 19ರಂದು ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಉತ್ಸವ ಮಂಡಳಿಗಳು ನಿರ್ಧರಿಸಿವೆ. 10 ದಿನಗಳ ಕಾಲ ಗಣೇಶನ ಆರಾಧನೆ ಜೋರಾಗಿರುತ್ತದೆ. 10ನೇ ದಿನ ಸಾರ್ವಜನಿಕ ಗಣೇಶ ಮೂರ್ತಿಗಳ ನಿಮಜ್ಜನಾ ಮೆರವಣಿಗೆ ಅದ್ಧೂರಿಯಾಗಿ ನೆರವೇರಲಿದೆ. ಈ ದೃಶ್ಯವೈಭವ ಕಣ್ತುಂಬಿಕೊಳ್ಳಲು ಹಲವೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ.
ಈ ಬಾರಿ ಸೆ.28ರಂದು ಗಣೇಶ ನಿಮಜ್ಜನಾ ಮೆರವಣಿಗೆ ದಿನವೇ ಈದ್ ಮಿಲಾದ್ ಹಬ್ಬ ಬಂದಿದೆ. ಆ ದಿನ ಅವರೂ ಕೂಡಾ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಸುತ್ತಾರೆ. ಇಂಥ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಮುಸ್ಲಿಂ ಧರ್ಮಗುರುಗಳು, ಅಂಜುಮನ್-ಏ-ಇಸ್ಲಾಂ ಸಂಸ್ಥೆಯವರು ಸಭೆ ನಡೆಸಿ ತಮ್ಮ ಹಬ್ಬವನ್ನು ಅಕ್ಟೋಬರ್ 1ರಂದು ಆಚರಿಸಲು ನಿರ್ಧರಿಸಿದ್ದಾರೆ.