ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹಳ್ಳಿಯಿಂದ ದಿಲ್ಲಿಗೆ ವ್ಯಾಪಿಸಿಕೊಂಡಿದೆ. ಪ್ರತಿನಿತ್ಯ 25 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು ಮುಂದಿನ ಮೂರು ತಿಂಗಳು ಕೊರೊನಾ ಆರ್ಭಟಿಸಲಿದಯಂತೆ. ಈ ಆತಂಕ ನಡುವೆ ತಜ್ಞರು ಅಕ್ಟೋಬರ್ ಮಧ್ಯ ಭಾಗದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಬಹುದು ಎಂದು ಹೇಳಿದ್ದಾರೆ.
ಇಡೀ ವಿಶ್ವವನ್ನೇ ಇನ್ನಿಲ್ಲದಂತೆ ಕಾಡ್ತಿರುವ ಕೊರೊನಾ ದಿನೇ ದಿನೇ ತನ್ನ ಕಬಂಧಬಾಹುವಿನ ಉದ್ದಗಲವನ್ನು ಹೆಚ್ಚಿಸುತ್ತಿದೆ. ಈ ಕೊರೊನಾ ನಿಯಂತ್ರಣ ಮಾಡಲು ಪ್ರತಿದಿನ ಹತ್ತು ಹಲವು ಸಂಶೋಧನೆಗಳು ನಡೆಯುತ್ತಲೇ ಇದೆ. ಆದರೆ ಖಾಸಗಿ ಸಂಸ್ಥೆವೊಂದು ನಡೆಸಿದ ಅಧ್ಯಯನದಲ್ಲಿ ಭಾರತದಲ್ಲಿ ಸೋಂಕು ಹರಡುವಿಕೆ ಸಂಬಂಧ ಹೊಸ ಮಾಹಿತಿ ಹೊರ ಹಾಕಿದೆ. ಈ ಮಾಹಿತಿ ದೇಶವಾಸಿಗಳನ್ನು ಬೆಚ್ಚಿಬೀಳಿಸಿದೆ. ಈ ವರದಿ ಪ್ರಕಾರ, ದೇಶದಲ್ಲಿ ಇನ್ನೂ 3 ತಿಂಗಳು ಸೋಂಕು ಹೆಚ್ಚಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಜುಲೈ 17ರಿಂದ ದೇಶದಲ್ಲಿ ಸೋಂಕು ಏರುತ್ತಿರುವ ಕೊರೊನಾ ಸೋಂಕಿನ ಸಂಖ್ಯೆ ಅಕ್ಟೋಬರ್ವರೆಗೂ ಇರಲಿದೆ ಎಂದು ತಜ್ಞರು ವರದಿಯಲ್ಲಿ ಹೇಳಿದ್ದಾರೆ. ಸದ್ಯ ಪ್ರತಿನಿತ್ಯ ದೇಶದಲ್ಲಿ 25 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ತಿದೆ. ಮುಂದೆ ಇದು ದುಪ್ಪಟ್ಟು ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಇಳಿಯುತ್ತೆ ಸೋಂಕಿತರ ಸಂಖ್ಯೆ:
ಕೊಂಚ ನಿರಾಳ ಆಗುವ ವಿಚಾರ ಎಂದರೆ ಭಾರತದಲ್ಲಿ ಅಕ್ಟೋಬರ್ ಮಧ್ಯ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ಬರುವ ಸಾಧ್ಯತೆಗಳಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅಕ್ಟೋಬರ್ ತಿಂಗಳ ಮಧ್ಯಭಾಗದಲ್ಲಿ ದೇಶದಲ್ಲಿ ಪ್ರತಿನಿತ್ಯ 20-22 ಸಾವಿರಕ್ಕೆ ಸೋಂಕಿತರ ಸಂಖ್ಯೆ ಇಳಿಕೆಯಾಗಬಹುದು. ಬಳಿಕ ಹಂತ ಹಂತವಾಗಿ ಸೋಂಕಿನ ಸಂಖ್ಯೆ ಇಳಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಅತಿ ಹೆಚ್ಚು ಕೊರೊನಾ ಪೀಡಿತ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್, ಉತ್ತರ ಪ್ರದೇಶದಲ್ಲಿ ಕಂಟೈನ್ಮೆಂಟ್ ಝೋನ್ಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಮತ್ತು ಸೀಮಿತ ಲಾಕ್ಡೌನ್ ನಂತರದ ನಿರ್ಧಾರಗಳಿಂದ ಲಾಭವಾಗುವ ಸಾಧ್ಯತೆಗಳಿದೆ. ಇತರೆ ರಾಜ್ಯಗಳಲ್ಲೂ ಸೋಂಕಿನ ವಿರುದ್ಧ ಕಠಿಣ ಕ್ರಮ ಮತ್ತು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿರುವುದರಿಂದ ಹಂತ ಹಂತವಾಗಿ ವರ್ಷದ ಅಂತ್ಯದಲ್ಲಿ ಸೋಂಕಿನ ಪ್ರಮಾಣ ಇಳಿಕೆ ನಿರೀಕ್ಷಿಸಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಒಟ್ಟಿನಲ್ಲಿ ದೇಶದಲ್ಲಿ ಇನ್ನೂ 3 ತಿಂಗಳು ಕೊರೊನಾ ಆರ್ಭಟ ಬಹುತೇಕ ಖಚಿತ ಎನಿಸಿಕೊಂಡಿದ್ದು ತಜ್ಞರ ಅಂದಾಜಿನಂತೆ ಅಕ್ಟೋಬರ್ ಬಳಿಕ ಕೊರೋನಾರ್ಭಟ ಇಳಿಯುತ್ತೇ ಎಂಬುದೇ ಕೊಂಚ ನಿರಾಳವಾಗುವ ವಿಚಾರವಾಗಿದೆ.