ಚೆನ್ನೈ: ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ರೋಗಗಳಿಗೆ ಹೋಲಿಸಿ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.
‘ತಾನು ನೀಡಿದ ಹೇಳಿಕೆಗೆ ಬದ್ಧವಾಗಿದ್ದು, ಯಾವುದೇ ರೀತಿಯ ಸವಾಲಿಗೆ ಸಿದ್ಧ’ ಎಂದು ಉದಯನಿಧಿ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿರುವ ಯುವ ಸಚಿವ, ಸನಾತನ ಧರ್ಮ ಕೊರೊನಾವೈರಸ್, ಮಲೇರಿಯಾ ಮತ್ತು ಡೆಂಗ್ಯೂ ವೈರಸ್ ಮತ್ತು ಸೊಳ್ಳೆಗಳಿಂದ ಉಂಟಾಗುವ ಜ್ವರವಿದ್ದಂತೆ. ಇಂಥದ್ದನ್ನು ಬೇರು ಸಮೇತ ಕಿತ್ತು ಹಾಕಬೇಕು. ಸನಾತನ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತದೆ. ಇದರ ನಿರ್ಮೂಲನೆ ಮಾಡುವುದರ ಮೂಲಕ ಮಾನವೀಯತೆ ಮತ್ತು ಮಾನವ ಸಮಾನತೆಯನ್ನು ಎತ್ತಿಹಿಡಿಯಬೇಕು ಎಂದು ಹೇಳಿಕೆ ನೀಡಿದ್ದೆ. ಸನಾತನಿ ಜನರ ಮಾರಣಹೋಮಕ್ಕೆ ಕರೆ ನೀಡಿಲ್ಲ. ಈ ಬಗ್ಗೆ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಉದಯ್ನಿಧಿ ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.
ಸನಾತನ ಧರ್ಮದ ಬಗ್ಗೆ ನಾನು ಹೇಳಿದ ಪ್ರತಿಯೊಂದು ಮಾತಿಗೂ ಬದ್ಧವಾಗಿದ್ದೇನೆ. ಆ ಧರ್ಮದಿಂದ ತುಳಿತಕ್ಕೊಳಗಾದವರ ಪರವಾಗಿ ಮಾತನಾಡಿದ್ದೇನೆ. ಅದರಿಂದ ಸಮಾಜದ ಮೇಲಾದ ದುಷ್ಪರಿಣಾಮಗಳ ಬಗ್ಗೆ ಹೋರಾಟ ನಡೆಸಿದ ಪೆರಿಯಾರ್ ಮತ್ತು ಅಂಬೇಡ್ಕರ್ ಅವರ ಬರಹಗಳನ್ನು ಯಾವುದೇ ವೇದಿಕೆಯಲ್ಲಿ ಪ್ರಸ್ತುತಪಡಿಸಲು ನಾನು ಸಿದ್ಧನಿದ್ದೇನೆ. ಸನಾತನ ಧರ್ಮವು ಅನೇಕ ಸಾಮಾಜಿಕ ಅನಿಷ್ಟಗಳಿಗೆ ಕಾರಣವಾಗಿದೆ ಎಂಬುದು ನನ್ನ ಅಭಿಮತ. ಹೇಳಿಕೆಗೆ ಬದ್ಧವಾಗಿದ್ದು, ಯಾವುದೇ ಸವಾಲುಗಳಿಗೂ ನಾನು ಸಿದ್ಧನಿದ್ದೇನೆ ಎಂದಿದ್ದಾರೆ.
Laxmi News 24×7