ಬೆಳಗಾವಿ: ಬೆಳಗಾವಿ ತಾಲೂಕು ರಚನೆಗೆ ನನ್ನ ಸಹಮತ ಇದೆ. ಆದರೆ, ಜಿಲ್ಲೆಯ ವಿಭಜನೆ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ಕೈಗೊಂಡರೆ ಮಾತ್ರ ನನ್ನ ಒಪ್ಪಿಗೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.
ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಹಿಂದೆ ಮೂರು ಜಿಲ್ಲೆಗಳನ್ನು ಮಾಡುತ್ತೇವೆ ಎಂದಾಗ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಮೂರು ಜಿಲ್ಲೆಗಳ ಬಗ್ಗೆ ಚರ್ಚಿಸಿ ನಿರ್ಣಯ ಮಾಡಬೇಕು. ಜಿಲ್ಲೆಗಾಗಿ ಗೋಕಾಕ್ ಮತ್ತು ಬೈಲಹೊಂಗಲ ತಾಲೂಕಿನವರ ನಡುವೆ ತೀವ್ರ ಪೈಪೋಟಿ ಇರುವುದು ಸಮಸ್ಯೆಯಾಗಿದೆ. ಇದರ ನಡುವೆ ಸವದತ್ತಿ ಧಾರವಾಡಕ್ಕೆ, ಖಾನಾಪುರ ಕಾರವಾರಕ್ಕೆ, ಅಥಣಿ ವಿಜಯಪುರಕ್ಕೆ ಸೇರಿಸಬೇಕು ಎಂಬ ಚರ್ಚೆಯೂ ಆಗಿತ್ತು. ಆದ್ದರಿಂದ ಎಲ್ಲರನ್ನೂ ಒಗ್ಗೂಡಿಸಿ ವಿಶ್ವಾಸಕ್ಕೆ ಪಡೆದು ಈ ಕಾರ್ಯ ಮಾಡಬೇಕು. ಹಿಂದಿನ ಸಮಸ್ಯೆ ನಿವಾರಿಸಿ, ಜಿಲ್ಲಾ ವಿಭಜನೆ ಮಾಡಬೇಕು ಎಂದು ಸಲಹೆ ನೀಡಿದರು.
ಬೆಳಗಾವಿ 2 ತಾಲೂಕು ರಚನೆ ವಿಚಾರ: ಬೆಳಗಾವಿ ಎರಡು ತಾಲೂಕು ರಚನೆ ವಿಚಾರಕ್ಕೆ ವಿಶೇಷವಾಗಿ ಬೆಳಗಾವಿ ನಗರ ಜಿಲ್ಲಾ ಕೇಂದ್ರ ಇರುವುದರಿಂದ ಶಿಷ್ಟಾಚಾರ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಯಾವುದೇ ಸಚಿವರು, ಮುಖ್ಯಮಂತ್ರಿಗಳು ಮತ್ತು ನ್ಯಾಯಾಧೀಶರೂ ಬಂದರೂ, ಇಲ್ಲಿನ ತಹಸೀಲ್ದಾರ್ ಶಿಷ್ಟಾಚಾರದಲ್ಲೇ ಇರುತ್ತಾರೆ. ಹಾಗಾಗಿ ಆಡಳಿತಾತ್ಮಕ ದೃಷ್ಟಿಯಿಂದ ಎರಡು ತಾಲೂಕು ರಚನೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.