Home / ರಾಜಕೀಯ / SC&ST ಸಮುದಾಯದ ಅಭಿವೃದ್ಧಿಗೆ ಮೀಸಲಿರಿಸಿರುವ ಹಣವನ್ನು ಇತರ ಜನ ಸಮುದಾಯ ಹಾಗೂ ಇತರ ಉದ್ದೇಶಕ್ಕೆ ಬಳಕೆ ಮಾಡುವುದಿಲ್ಲ ಎಂದು ಸಿಎಂ

SC&ST ಸಮುದಾಯದ ಅಭಿವೃದ್ಧಿಗೆ ಮೀಸಲಿರಿಸಿರುವ ಹಣವನ್ನು ಇತರ ಜನ ಸಮುದಾಯ ಹಾಗೂ ಇತರ ಉದ್ದೇಶಕ್ಕೆ ಬಳಕೆ ಮಾಡುವುದಿಲ್ಲ ಎಂದು ಸಿಎಂ

Spread the love

ಬೆಂಗಳೂರು: ಸರ್ಕಾರ ಯಾವುದೇ ರೀತಿಯಲ್ಲೂ ಪರಿಶಿಷ್ಟ ಜಾತಿ/ಪಂಗಡಗಳ ಕಲ್ಯಾಣಕ್ಕೆ ಎಂದು ಮೀಸಲಿರಿಸಿದ ಹಣವನ್ನು ಇತರ ಜನ ಸಮುದಾಯಗಳ, ಇತರ ಉದ್ದೇಶಗಳಿಗೆ ಬಳಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಎಸ್​​​ಸಿಪಿ ಮತ್ತು ಟಿಎಸ್‌ಪಿ ಯೋಜನೆಯಲ್ಲಿನ ಅನುದಾನಗಳನ್ನು ಇತರ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಕೆಲವರು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

ಕೆಲವು ಮಾಧ್ಯಮಗಳಲ್ಲೂ ಈ ಕುರಿತು ವರದಿಗಳಿವೆ. ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಿರಿಸಿದ ಅನುದಾನಗಳನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುತ್ತಿದ್ದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯ್ದೆ 2013ರ ಸೆಕ್ಷನ್ 7(ಡಿ)ಯನ್ನು ರದ್ದುಮಾಡಲು ಈಗಾಗಲೇ ತೀರ್ಮಾನ ಮಾಡಲಾಗಿದೆ. ಬಜೆಟ್‌ನಲ್ಲೂ ಈ ಬಾರಿ ಘೋಷಿಸಲಾಗಿದೆ. ಇದರ ಪರಿಣಾಮವಾಗಿ ಈ ಕೆಳಗಿನ ಇಲಾಖೆಗಳಿಗೆ ಅನುದಾನ ಹಂಚಿಕೆಯನ್ನು ಕಡಿತಗೊಳಿಸಿದ್ದು, ಅದನ್ನು ಈ ಬಾರಿ ಫಲಾನುಭವಿ ಆಧಾರಿತ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಲಾಗಿದೆ. ಸೆಕ್ಷನ್ 7(ಡಿ) ಅಡಿಯಲ್ಲಿದ್ದ ಕಾರಣಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ರಸ್ತೆ, ಸೇತುವೆಗಳಿಗೆ ಬಳಸಲು ಅವಕಾಶವಿತ್ತು. ಇದರಿಂದ ಪರಿಶಿಷ್ಟ ಸಮುದಾಯಗಳಿಗೆ ಆಗುತ್ತಿದ್ದ ಸಮಸ್ಯೆಯನ್ನು ನಮ್ಮ ಸರ್ಕಾರ ನಿಲ್ಲಿಸಿದೆ ಎಂದು ಸಿಎಂ ತಿಳಿಸಿದ್ದಾರೆ.

ಪ.ಜಾತಿ/ಪ.ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಡಿ ಅನುದಾನ ಹಂಚಿಕೆ ಮಾಡಬೇಕಾಗಿದ್ದು, 2023-24ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಡಿ ಒಟ್ಟು 34,294 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಇದು 13% ಅಂದರೆ 4,031 ಕೋಟಿ ರೂ. ಹೆಚ್ಚಳವಾಗಿದೆ. ಸರ್ಕಾರವು ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಯಡಿ ಮೀಸಲಿರಿಸಿದ ಒಟ್ಟು ಅನುದಾನದಲ್ಲಿ 11,144 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆಂದು ಒದಗಿಸಿದೆ. ಇಷ್ಟೂ ಹಣವನ್ನು ಕಡ್ಡಾಯವಾಗಿ ಪ.ಜಾತಿ/ಪಂಗಡಗಳ ಕುಟುಂಬಗಳಿಗೆ ವಿನಿಯೋಗಿಸಲಾಗುವುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಅನುದಾನ ಹಂಚಿಕೆಗೆ ಅವಕಾಶ: ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಧಿನಿಯಮ 2013ರ ಅನ್ವಯ ಪ.ಜಾತಿ/ಪ.ಪಂಗಡದವರಿಗೆ ನೇರವಾಗಿ ಪ್ರಯೋಜನವಾಗುವ ವೈಯಕ್ತಿಕ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ವಾಸಸ್ಥಳ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡಲು ಅವಕಾಶವಿರುತ್ತದೆ. ಈ ಅವಕಾಶಗಳನ್ನು ಇನ್ನಷ್ಟು ಹೆಚ್ಚಿಸಲಾಗುವುದು ಹಾಗೂ ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕೆ ಒತ್ತು ಕೊಡಲು ಉದ್ದೇಶಿಸಿದ್ದೇವೆ. ನಮ್ಮ ಸರ್ಕಾರವು ದಲಿತ, ದಮನಿತ ವರ್ಗಗಳಿಗೆ ನ್ಯಾಯಯುತವಾದ ಹಕ್ಕುಗಳನ್ನು ಈಡೇರಿಸಲು ಮೊದಲಿನಿಂದಲೂ ಬದ್ಧವಾಗಿದೆ. 2008ರಿಂದ 2013ರವರೆಗೆ ಆಡಳಿತ ನಡೆಸಿದ ಸರ್ಕಾರ ಎಸ್‌ ಸಿಪಿ/ಟಿಎಸ್‌ಪಿ ಯೋಜನೆಗಾಗಿ 22,261 ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು. ಆದರೆ 2013ರವರೆಗೆ ಆಡಳಿತ ನಡೆಸಿದ್ದ ನಮ್ಮ ಸರ್ಕಾರ 88,530 ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು. ಈಗಲೂ ನಾವು 34,294 ಕೋಟಿ ರೂ.ಗಳನ್ನು ಒದಗಿಸಿಕೊಟ್ಟಿದ್ದೇವೆ ಎಂದು ಸಿಎಂ ವಿವರಿಸಿದ್ದಾರೆ.


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ