ಬೆಂಗಳೂರು : ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಶಾಸಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ, ಆರ್. ಅಶೋಕ್, ಹಿರಿಯ ಶಾಸಕರಾದ ಸುರೇಶ್ ಕುಮಾರ್, ವಿ. ಸುನೀಲ್ ಕುಮಾರ್, ಮುನಿರತ್ನ, ಆರ್. ಅಶೋಕ್, ಅರವಿಂದ್ ಬೆಲ್ಲದ್, ಮಹೇಶ್ ಟೆಂಕಿನಕಾಯಿ, ಧೀರಜ್ ಮುನಿರಾಜು, ಚನ್ನಬಸಪ್ಪ, ಜ್ಯೋತಿ ಗಣೇಶ್, ಸಿ. ಕೆ ರಾಮಮೂರ್ತಿ ಸೇರಿದಂತೆ ಹಲವರು ಬಿಜೆಪಿ ಶಾಸಕರನ್ನು ವಶಕ್ಕೆ ಪಡೆದ ಪೊಲೀಸರು ಬಿಎಂಟಿಸಿ ಬಸ್ ಹಾಗೂ ಪೊಲೀಸರು ವ್ಯಾನ್ನಲ್ಲಿ ಕರೆದೊಯ್ದರು.
ಪ್ರತಿಭಟನಾ ಸ್ಥಳದಲ್ಲಿ ಒಂದು ರೀತಿಯ ಹೈಡ್ರಾಮವೇ ನಡೆದು ಹೋಯಿತು. ಇದಕ್ಕೂ ಮುನ್ನ ವಿಧಾನಸೌಧದ ಕೆಂಗಲ್ ಗೇಟ್ನ ಪಶ್ಚಿಮ ದ್ವಾರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಶಾಸಕರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಷ್ಟರಲ್ಲೇ ಸ್ಥಳಕ್ಕೆ ಬಂದ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕರು, ಬಿಜೆಪಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಸರ್ಕಾರ ಸರ್ವಾಧಿಕಾರಿ ರೀತಿ ವರ್ತಿಸುತ್ತಿದೆ: ರಾಜ್ಯ ಸರ್ಕಾರ ಸರ್ವಾಧಿಕಾರಿ, ಹಿಟ್ಲರ್ ರೀತಿ ವರ್ತಿಸುತ್ತಿದ್ದು, ಸ್ಪೀಕರ್ ಕುರ್ಚಿಯನ್ನೂ ದುರ್ಬಳಕೆ ಮಾಡಿಕೊಂಡು ಬಿಜೆಪಿ ಸದಸ್ಯರನ್ನು ಅಮಾನತು ಮಾಡಿದ್ದಾರೆ. ಇದೊಂದು ಕರಾಳ ದಿನವಾಗಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.