ಬೆಂಗಳೂರು: ”ಕರ್ನಾಟಕದಿಂದಲೇ ಬಿಜೆಪಿಯ ಅವನತಿ ಪ್ರಾರಂಭವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಸ್ಪಷ್ಟವಾದ ಬಹುಮತ ದೊರೆಯಲು ಸಾಧ್ಯವಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ವಿಧಾನಸೌಧದಲ್ಲಿ ಇಂದು ಸೋಮವಾರ ಸಂಜೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ”ಕರ್ನಾಟಕದಲ್ಲಿ ಮೋದಿಯವರನ್ನು ಸಮರ್ಥವಾಗಿ ಎದುರಿಸಲಾಗಿದೆ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮೋದಿಯವರು 28 ಕಡೆ ಪ್ರವಾಸ ಕೈಗೊಂಡಿದ್ದು, ಅವರು ಬಂದ ಕಡೆಗಳೆಲ್ಲಾ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಕರ್ನಾಟಕದಲ್ಲಿ ಸಮರ್ಥವಾಗಿ ಎದುರಿಸಲೇ ಇಲ್ಲ. ಕಾಂಗ್ರೆಸ್ಗೆ ಬಹುಮತ ಬಂದಿದೆ. ಈ ಬಾರಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಸೋಲು ಅನುಭವಿಸಲಿಲ್ವಾ?. ಯುಪಿಎ ಮಿತ್ರಪಕ್ಷಗಳು ಗೆಲ್ಲಲಿವೆ” ಎಂದರು.
”ಮುಂದಿನ ಲೋಕಸಭಾ ಚುನಾವಣೆಗೆ ಒಟ್ಟುಗೂಡಿ ಚುನಾವಣೆ ನಡೆಸಬೇಕೆಂಬ ಅಜೆಂಡಾ ಹೊಂದಿದ್ದು, ಹಾಗಾಗಿ ಚರ್ಚೆ ನಡೆಯುತ್ತಿದೆ ಎಂದ ಅವರು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಮಿತ್ರ ಪಕ್ಷಗಳು ಬಹುಮತವನ್ನು ಸಾಧಿಸಲಿದೆ. ಬಿಜೆಪಿ ಮಿತ್ರ ಪಕ್ಷಗಳು ಸೋಲನ್ನು ಅನುಭವಿಸಲಿದ್ದು, ವಿಪಕ್ಷಗಳ ಒಕ್ಕೂಟ ಗೆಲುವು ಸಾಧಿಸಲಿವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
”ಬೆಂಗಳೂರಿನಲ್ಲಿ ಇಂದು ನಡೆಯುತ್ತಿರುವ ವಿಪಕ್ಷಗಳ ಒಕ್ಕೂಟದ ಎರಡನೇ ಸಭೆಯಾಗಿದ್ದು, ಸುಮಾರು 24 ಪಕ್ಷದ ನಾಯಕರು ನಾಳಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ವಿಪಕ್ಷಗಳ ನಾಯಕರು ಇಂದು ಮತ್ತು ನಾಳೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟುಗೂಡಿ ಚುನಾವಣೆ ಎದುರಿಸುವುದೇ ಈ ಸಭೆಯ ಮುಖ್ಯ ಉದ್ದೇಶವಾಗಿದೆ” ಎಂದು ಸಿಎಂ ವಿವರಿಸಿದರು.