ಹುಬ್ಬಳ್ಳಿ: ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವರೂರ ಕ್ಷೇತ್ರದ ಗುಣಧರ ನಂದಿ ಶ್ರೀಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಇತಿಹಾಸದಲ್ಲೇ ಕ್ರೂರ ಘಟನೆ: ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀ ಕಾಮಕುಮಾರ ನಂದಿ ಮಹಾರಾಜ ಹತ್ಯೆ ಖಂಡನೀಯ. ಅವರಿಗೆ ವಿದ್ಯುತ್ ಶಾಕ್ ಕೊಟ್ಟು, ಕೈಕಾಲು ಕತ್ತರಿಸಿ ಬೋರ್ವೆಲ್ನಲ್ಲಿ ಹಾಕಿದ್ದಾರೆ. ಇದು ಇತಿಹಾಸದಲ್ಲೇ ಕ್ರೂರ ಘಟನೆ. ಜೈನ ಸನ್ಯಾಸಿಗಳು ಕಾಲ್ನಡಿಗೆ ಯಾತ್ರೆ, ಸರ್ವಸಂಗ ಪರಿತ್ಯಾಗ ಮಾಡ್ತಾರೆ. ಅಂತವರನ್ನು ಹೀಗೆ ಹತ್ಯೆ ಮಾಡಿದ್ದು ಹೇಯ ಕೃತ್ಯ. ಕಾಣೆಯಾಗಿದ್ದಾರೆ ಅಂದಮೇಲೂ ಈ ಕೇಸ್ನ್ನು ಪೊಲೀಸರು ಗಂಭೀರವಾಗಿ ತೆಗದುಕೊಂಡಿರಲಿಲ್ಲ. ಪ್ರತಿಭಟನೆ ಮಾಡ್ತೀನಿ ಅಂದಾಗ ಗಂಭೀರವಾಗಿ ತೆಗೆದುಕೊಂಡ್ರು ಎಂದು ಆರೋಪಿಸಿದರು.
ಮುನಿಶ್ರೀ ವಿರುದ್ಧ ಹಣದ ಆರೋಪ ಸರಿಯಲ್ಲ: ಶ್ರೀಗಳು ಆರೋಪಿಗಳಿಗೆ ಕಟ್ಟಡ ಕಟ್ಟಲು ದುಡ್ಡು ಕೊಟ್ಟಿದ್ರು ಅಂತ ಮಾಹಿತಿ ಇದೆ. ಬಡ್ಡಿ ವ್ಯವಹಾರ ಮಾಡ್ತಿದ್ರು ಅಂತ ಹೇಳಿಕೆ ತೆಗೆದುಕೊಳ್ಳುವ ಪ್ರಯತ್ನ ಮಾಡ್ತಾ ಇದ್ದಾರೆ. ಇದು ಸರ್ಕಾರಕ್ಕೆ ಶೋಭೆ ತರುವ ಸಂಗತಿ ಅಲ್ಲ. ಶಾಸಕ ಅಭಯ್ ಪಾಟೀಲ್ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಾಗ ಆರೋಪಿಗಳ ಹೆಸರು ಬಿಡುಗಡೆ ಮಾಡಿದ್ರು. ಈ ಕೃತ್ಯವನ್ನು ಯಾರೇ ಮಾಡಿದ್ರು ಅಪರಾಧ. ಇದಕ್ಕೆ ಜಾತಿ ಇರಲ್ಲ. ಸರ್ಕಾರದ ನಿಲುವು ಸರಿಪಡಿಸಿಕೊಳ್ಳಬೇಕು. ಶ್ರೀಗಳ ಬೇಡಿಕೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ತರ್ತೇನೆ. ರಾಜ್ಯ ಸರ್ಕಾರ ಸಹ ಗಮನಕ್ಕೆ ತೆಗೆದುಕೊಳ್ಳಬೇಕು. ನಾನು ಕೇಂದ್ರ ಸರ್ಕಾರದಿಂದ ಸಂಪೂರ್ಣ ಪ್ರಯತ್ನ ಮಾಡ್ತೇವೆ ಎಂದು ತಿಳಿಸಿದರು.