ಹುಬ್ಬಳ್ಳಿ : ನಮ್ಮ ಭಾರತ ದೇಶದಲ್ಲಿ ಆತಂಕವಾದಿಗೆ ಯಾವ ಶಿಕ್ಷೆಯಾಗುವುದಿಲ್ಲವೋ ಅಂತಹ ಶಿಕ್ಷೆ ಜೈನ ಮುನಿಗೆ ನೀಡಲಾಗಿದೆ.
ಕಾಮಕುಮಾರ ನಂದಿ ಮಹಾರಾಜ ಅವರನ್ನು ಈ ರೀತಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ಹುಬ್ಬಳ್ಳಿಯ ವರೂರಿನಲ್ಲಿ ಜೈನ ಮುನಿ ಗುಣಧರನಂದಿ ಮಹಾರಾಜ್ ಸ್ವಾಮೀಜಿ ಹೇಳಿದ್ದಾರೆ.
ವರೂರಿನಲ್ಲಿ ಮಾತನಾಡಿದ ಅವರು, ಇಂತಹ ಕ್ರೂರವಾದ ಘಟನೆಯಾದರೂ ಸಹ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಸ್ಪಂದನೆ ಮಾಡಿರಲಿಲ್ಲ. ಮಾಧ್ಯಮಗಳ ಸಹಾಯದಿಂದ ಈ ಕೃತ್ಯ ಇದೀಗ ಬೆಳಕಿಗೆ ಬಂದಿದೆ. ಬಳಿಕ ಸರ್ಕಾರ ಹಾಗೂ ಜನಪ್ರತಿನಿಧಿಗಳಿಂದ ಸ್ಪಂದನೆ ಸಿಗುತ್ತಿದ್ದು, ಈ ಸಂಬಂಧ ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ನಾಳೆ ಸಂಜೆ 5 ಗಂಟೆವರೆಗೆ ನಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುವುದಾಗಿ ಹೇಳಿದ್ದು, ನಾಳೆ ಸಿದ್ದರಾಮಯ್ಯ ಅವರು ಕೂಡ ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ವಿಚಾರವಾಗಿ ಪ್ರಹ್ಲಾದ್ ಜೋಶಿ ಅವರ ಮೂಲಕ ಕೇಂದ್ರ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಗೆ ಸರ್ಕಾರ ನಾಳೆ ಸಂಜೆ ಹೊತ್ತಿಗೆ ಸ್ಪಂದಿಸದೇ ಹೋದಲ್ಲಿ ಅಮರಣಾಂತ ಉಪವಾಸ ಶುರು ಮಾಡುತ್ತೇವೆ.
ನಮಗೆ ಭದ್ರತೆ ಒದಗಿಸುವವರೆಗೂ ನಿರಂತರವಾಗಿ ಅಮರಣಾಂತ ಉಪವಾಸ ಶತಸಿದ್ಧ ಎಂದು ಸ್ವಾಮೀಜಿ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.