ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಧರ್ಮ ಸಂಕಟ ಎದುರಾಗಿದೆ.
ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂದು ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳು ಹಕ್ಕೊತ್ತಾಯ ಮಂಡಿಸಿವೆ.
ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿಂದು ಬೃಹತ್ ಸಭೆ ನಡೆಸಿದ ಮಠಾಧೀಶರು, ಎಲ್ಲ ವೀರಶೈವ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು. ಮಠಾಧೀಶರ ಸಭೆಯ ನೇತೃತ್ವವನ್ನು ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ವಹಿಸಿದ್ದರು. ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಸ್ವಾಮೀಜಿ, ಉಜ್ಜೈನಿ ಪೀಠಗಳ ಜಗದ್ಗುರು, ಮುಂಡರಗಿ ಅನ್ನದಾನೇಶ್ವರ ಸ್ವಾಮೀಜಿ, ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ಸಿದ್ಧರಾಮ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಇದ್ದರು.
ಈಗಾಗಲೇ ವೀರಶೈವ ಲಿಂಗಾಯತದ 28 ಉಪಪಂಗಡಗಳಾದ ಗಾಣಿಗ, ಲಿಂಗಾಯತ ಕುರುಬ, ಹಡಪದ, ಮೇದಾರ, ನೇಕಾರ ಸೇರಿ 28 ಉಪಪಂಗಡಗಳು ಒಬಿಸಿ ಪಟ್ಟಿಯಲ್ಲಿವೆ. ಇನ್ನುಳಿದ 59 ಉಪಪಂಗಡಗಳನ್ನೂ ಒಬಿಸಿ ಪಟ್ಟಿಯಲ್ಲಿ ಸೇರಿಸುವಂತೆ ಮಠಾಧೀಶರು ಒತ್ತಾಯಿಸಿದರು. ಪಂಚಮಸಾಲಿ, ಸಾದರ, ಬಣಜಿಗ, ಜಂಗಮ, ಉಪ್ಪಾರ, ಕುಂಬಾರ, ಶೀಲವಂತ ಸೇರಿ 59 ಉಪಪಂಗಡಗಳನ್ನು ಒಬಿಸಿಗೆ ಸೇರಿಸಲು ಮನವಿ ಮಾಡಿದ್ದಾರೆ.
ವೀರಶೈವ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಇಡೀ ಕರ್ನಾಟಕದ ಮಠಾಧೀಶರು ಒಗ್ಗೂಡಲು ಮೂವರು ಮಾಸ್ಟರ್ ಮೈಂಡ್ ಇದ್ದಾರೆ ಎಂದು ಮೂರು ಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ಈ ಎಲ್ಲ ಹೋರಾಟದ ಮಾಸ್ಟರ್ ಮೈಂಡ್ ಶ್ರೀಶೈಲ ಪೀಠದ ಚನ್ನಸಿದ್ಧರಾಮ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ಮಾಮೀಜಿ, ಮುಂಡರಗಿ ಅನ್ನದಾನೇಶ್ವರ ಸ್ವಾಮೀಜಿ ಎಂದು ಹೇಳಿದರು.
ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡುವುದು ಅನಿವಾರ್ಯ. ನಿಮ್ಮ ರೊಟ್ಟಿ ಕೊಟ್ಟ ಋಣವನ್ನು ತೀರಿಸುವ ಸಮಯ ಬಂದಿದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಬಂದಿದ್ದೇವೆ ಎಂದ ಸ್ವಾಮೀಜಿಗಳು ಹೇಳಿದರು.
ಲಿಂಗಾಯತ ಸಮಾಜವನ್ನು ಕೇಂದ್ರ ಒಬಿಸಿ ಸೇರಿಸಿದರೆ ಸಮಾಜದ ಮಕ್ಕಳಿಗೆ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರ ತಾಯಿ ಸ್ಥಾನದಲ್ಲಿ ನಿಂತುಕೊಂಡು ಬೇಡಿಕೆ ಈಡೇರಿಸಬೇಕು. ಇದು ನಿಮ್ಮ ಹಕ್ಕು, ಭಿಕ್ಷೆ ಅಲ್ಲ. ಭಕ್ತರ ಮನಿಗೆ ಹೋಗಿ ಭಿಕ್ಷೆ ಬೇಡುತ್ತೇವೆಯೇ ಹೊರತು ಕೇಂದ್ರಕ್ಕೆ ಅಲ್ಲ ಎಂದು ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.