Breaking News

ಮುರುಘಾ ಶ್ರೀಗಳ ವಿರುದ್ಧದ ಸಾಕ್ಷಿಗಳ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ

Spread the love

ಬೆಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶರಣರ ವಿರುದ್ಧ ಚಿತ್ರದುರ್ಗ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಡೆಸುತ್ತಿರುವ ಸಾಕ್ಷಿಗಳ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಪ್ರಕರಣದಲ್ಲಿ ಆರೋಪಿಯಾಗಿರುವ ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಜು.1ರವರೆಗೆ ತಡೆಯಾಜ್ಞೆ ಈ ಮಧ್ಯಂತರ ಆದೇಶ ಮಾಡಿದೆ.

ಇದೇ ಪ್ರಕರಣ ಸಂಬಂಧ ಮರುಘಾ ಶರಣರು ಹೈಕೋರ್ಟ್‌ಗೆ ಒಟ್ಟು ಮೂರು ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಜೂ.2ರಂದು ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ಚಿತ್ರದುರ್ಗ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಡೆಸುತ್ತಿರುವ ಸಾಕ್ಷಿಗಳ ವಿಚಾರಣಾ ಪ್ರಕ್ರಿಯೆಗೆ ಜು.1ರವರೆಗೆ ತಡೆಯಾಜ್ಞೆ ನೀಡಿತ್ತು. ಅದೇ ಆದೇಶವನ್ನು ಬುಧವಾರ ವಿಚಾರಣೆ ನಡೆದ ಮೂರನೇ ಅರ್ಜಿಗೂ ಅನ್ವಯಿಸಿರುವ ಹೈಕೋರ್ಟ್, ವಿಚಾರಣೆಯನ್ನು ಜೂ.21ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ ಏನು?: ಮುರುಘಾ ಮಠದ ಹಾಸ್ಟೆಲ್​ನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಚಿತ್ರದುರ್ಗದ ಮುರುಘಾ ಮಠದಲ್ಲಿಯೇ ಶ್ರೀಗಳ ವಿರುದ್ಧ ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ 2022ರ ಆ.26ರಂದು ದೂರು ದಾಖಲಾಗಿತ್ತು. ಅವರನ್ನು ಪೊಲೀಸರು 2022ರ ಸೆ.1ರಂದು ಚಿತ್ರದುರ್ಗದ ಬೃಹನ್ಮಠದಲ್ಲಿ ಬಂಧಿಸಿದ್ದರು. ಶರಣರು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ನಡುವೆ ತನಿಖಾಧಿಕಾರಿಗಳು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ-2012, ಭಾರತೀಯ ದಂಡ ಸಂಹಿತೆ-1860, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ-1988, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯ್ದೆ-1989 ಮತ್ತು ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯ್ದೆ-2015ರ ವಿವಿಧ ಸೆಕ್ಷನ್‌ಗಳ ಅಡಿ ಸೆಷನ್ಸ್ ನ್ಯಾಯಾಲಯವು ಶರಣರ ವಿರುದ್ಧ ದೋಷಾರೋಪ ಹೊರಿಸಿ, ಸಾಕ್ಷಿಗಳ ವಿಚಾರಣೆಗೆ ಆದೇಶಿಸಿದೆ. ಈ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ : ಈ ನಡುವೆಯೇನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಶರಣರು ನಿಯಮಿತ ಜಾಮೀನು ಕೋರಿ ಜೂ.7ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮುರುಘಾ ಶರಣರ ಪರವಾಗಿ ವಕೀಲ ಸಂದೀಪ್‌ ಪಾಟೀಲ್‌ ಅರ್ಜಿ ದಾಖಲಿಸಿದ್ದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ