Breaking News

ವಿದ್ಯುತ್ ಅವಘಡ: ನೂರಾರು ಎಲೆಕ್ಟ್ರಿಕ್ ಉಪಕರಣಗಳು ಸುಟ್ಟು ಭಸ್ಮ, ನಾಲ್ವರಿಗೆ ಗಂಭೀರ ಗಾಯ

Spread the love

ತುಮಕೂರು: ವಿದ್ಯುತ್ ಸ್ಪರ್ಶದಿಂದ ಗಂಭೀರವಾಗಿ ಗಾಯಗೊಂಡ ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದು, ನೂರಾರು ಮನೆಗಳ ವಿದ್ಯುತ್ ಉಪಕರಣಗಳು ಸುಟ್ಟು ಭಸ್ಮವಾಗಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ‌ತಾಲೂಕಿನ ಚಿಲುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿನ 11 ಕೆವಿ ವಿದ್ಯುತ್ ಸಾಮರ್ಥ್ಯದ ತಂತಿ ತುಂಡಾದ ಪರಿಣಾಮ ಅವಘಡ ಸಂಭವಿಸಿದೆ.

ಗ್ರಾಮದ 70 ಮನೆಗಳಲ್ಲಿನ ವಿದ್ಯುತ್ ಉಪಕರಣಗಳು ಭಸ್ಮವಾಗಿದ್ದು, ನೂರಾರು ಮನೆಗಳ ವೈರಿಂಗ್ ಸೇರಿದಂತೆ ಗೃಹಪಯೋಗಿ‌ ವಸ್ತುಗಳು, ವಿದ್ಯುತ್ ಮೀಟರ್​ಗಳು ಸುಟ್ಟು ಭಸ್ಮವಾಗಿವೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಈ ನಡುವೆ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಾಯಿ ಶಾರದಮ್ಮ (55), ಮಗ ಮಂಜುನಾಥ್ (35), ಸೊಸೆ ವರಲಕ್ಷ್ಮಿ (30), ಮೊಮ್ಮಗ ದರ್ಶನ್ (12 )ವಿದ್ಯುತ್ ‌ಶಾಕ್​ಗೆ ತುತ್ತಾಗಿದ್ದಾರೆ.

ಪ್ರಾಣಾಪಾಯದಿಂದ ಪಾರಾಗಿರುವ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವಘಡ ಸಂಭವಿಸಿದ್ದ ಸ್ಥಳಕ್ಕೆ ಮದುಗಿರಿ ಡಿವೈಎಸ್ಪಿ, ಕೊರಟಗೆರೆ ತಹಶೀಲ್ದಾರ್, ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ತಂತಿ‌ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಸುಟ್ಟು ಕರಕಲಾದ ಗೃಹಪಯೋಗಿ ವಸ್ತುಗಳಿಗೆ ಶೀಘ್ರ ಪರಿಹಾರವನ್ನೂ ಕೊಡುವುದಾಗಿ ಬೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ನಾಲ್ವರ ಆರೋಗ್ಯ ವಿಚಾರಿಸಿದ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಸೂಕ್ತ ಹಾಗೂ ಹೆಚ್ಚಿನ ಚಿಕಿತ್ಸೆಗೆ ಭರವಸೆ ನೀಡಿದ್ದಾರೆ.

ಸಲಾಕೆ ವಿದ್ಯುತ್​ ತಂತಿಗೆ ತಗುಲಿ ವ್ಯಕ್ತಿ ಸಾವು: ಅಡಕೆ ಮರದಿಂದ ಅಡಕೆ ಕೊಯ್ಯುತ್ತಿದ್ದಾಗ ವಿದ್ಯುತ್​ ಶಾಕ್​ ಹೊಡೆದು ಸ್ಥಳದಲ್ಲೇ ವ್ಯಕ್ತಿಯೊಬ್ಬ ಮೃತಪಟ್ಟಿದ್ದ ಘಟನೆ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ಮೂಸಬ್ಬ ಎಂಬವರ ತೋಟದಲ್ಲಿ ಇತ್ತೀಚೆಗೆ ನಡೆದಿತ್ತು. ಬಂಟ್ವಾಳ ತಾಲೂಕಿ ಬೋಳಿಯಾರು ಗ್ರಾಮದ ನಿವಾಸಿ ಇಬ್ರಾಹಿಂ ಎಂಬವರ ಪುತ್ರ 28 ವರ್ಷದ ಶಾಫಿ ಎನ್ನುವವರು ಸಾವನ್ನಪ್ಪಿದ್ದರು. ಶಾಫಿ ಅವರು ಅನೇಕ ವರ್ಷಗಳಿಂದ ಅಡಕೆ ವ್ಯಾಪಾರ ನಡೆಸುತ್ತಿದ್ದರು. ಬೇರೆಯವರ ತೋಟದ ಅಡಕೆ ಖರೀದಿಸಿ, ನಂತರ ಇವರೇ ಹೋಗಿ ಕೊಯ್ದುಕೊಂಡು ಬರುತ್ತಿದ್ದರು.

ವ್ಯಾಪಾರ ಅಭಿವೃದ್ಧಿಗೊಂಡಂತೆ ಈ ವರ್ಷ ಶಾಪಿ ಮರದಿಂದ ಅಡಕೆ ಕೀಳಲೆಂದು ಸಾವಿರಾರು ರೂಪಾಯಿ ನೀಡಿ ಹೊಸ ಸಲಾಕೆ ಕೊಂಡಿದ್ದರು. ಈ ರೀತಿ ಬೇರೆಯವರ ತೋಟದಲ್ಲಿ ಅದೇ ಸಲಾಕೆಯಲ್ಲಿ ಅಡಕೆ ಕೊಯ್ಯುತ್ತಿರುವ ವೇಳೆಯಲ್ಲಿ ಶಾಫಿ ಅವರ ಕೈಯ್ಯಲ್ಲಿದ್ದ ಸಲಾಕೆ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಹಾದು ಹೋಗಿದ್ದ ವಿದ್ಯುತ್​ ತಂತಿಗೆ ತಗುಲಿದೆ. ಸಲಾಕೆ ಫೈಬರ್​ದಾಗಿದ್ದರೂ ಅದರಲ್ಲಿ ಅಡಕೆ ಕೀಳಲೆಂದು ಅಳವಡಿಸಿದ್ದ ಕಬ್ಬಿಣದ ಕತ್ತಿಯಿಂದಾಗಿ ವಿದ್ಯುತ್​ ಹರಿದು ಶಾಫಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ