ಬೆಳಗಾವಿ : ಒಂದೆಡೆ ಸರ್ಕಾರ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ಘೋಷಿಸಿದ್ದರೆ, ಮತ್ತೊಂದೆಡೆ ಮಗ್ಗಗಳ ವಿದ್ಯುತ್ ದರ ಹೆಚ್ಚಾಗಿದ್ದು ನೇಕಾರರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ.
ಇದರಿಂದ ಆಕ್ರೋಶಗೊಂಡಿರುವ ಬೆಳಗಾವಿಯ ನೇಕಾರರು ವಿದ್ಯುತ್ ಬಿಲ್ ಕಟ್ಟದಿರಲು ನಿರ್ಧರಿಸಿದ್ದಾರೆ. ಅಲ್ಲದೇ ಉಚಿತ ವಿದ್ಯುತ್ ಜಾರಿ ಸೇರಿ ಇನ್ನಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸೇವಾ ಸಂಘದ ನೇತೃತ್ವದಲ್ಲಿ ನೇಕಾರರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಏಪ್ರಿಲ್ 1ರಿಂದ ಕನಿಷ್ಟ ಶುಲ್ಕ 90 ರಿಂದ 140 ರೂ. ಏರಿಕೆ ಮತ್ತು ಯೂನಿಟ್ ದರ ಹೆಚ್ಚಳ ಮಾಡಿದ್ದನ್ನು ತಕ್ಷಣವೇ ನಿಲ್ಲಿಸಬೇಕು. ವೃತ್ತಿಪರ ನೇಕಾರರಿಗೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಕಾರ್ಮಿಕ ಸೌಲಭ್ಯಗಳನ್ನು ಜಾರಿ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿನ ನೇಕಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಸಾಲದ ಹೊರೆಯಿಂದ 42 ಜನ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಕುಟುಂಬಸ್ಥರಿಗೆ ಕನಿಷ್ಠ 10 ಲಕ್ಷ ರೂ. ಪರಿಹಾರ ಒದಗಿಸಬೇಕು. ನೇಕಾರರು ವಾಸಿಸುತ್ತಿರುವ ಜಾಗಗಳಿಗೆ ಸರ್ಕಾರ ಹಕ್ಕು ಪತ್ರ ಮತ್ತು ಸಿಟಿಎಸ್ ಉತಾರಗಳನ್ನು ಒದಗಿಸಬೇಕು. ಜಾಗ ಇಲ್ಲದವರಿಗೆ ನಿವೇಶನಗಳನ್ನು ನೀಡುವುದು ಸೇರಿ ಇನ್ನಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, “ಕೆಆರ್ಇಎಸ್ ನೇಕಾರರಿಗೆ ವಿದ್ಯುತ್ ಹೊರೆ ಮಾಡಿದೆ. ಸರ್ಕಾರ ಮಧ್ಯಸ್ಥಿಕೆ ವಹಿಸುವ ಮೂಲಕ ನಿಲ್ಲಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ನಾವೆಲ್ಲ ಹೋರಾಟದ ಹಾದಿ ತುಳಿಯಬೇಕಾಗುತ್ತದೆ. ಈ ಸಂಬಂಧ ಇಂದು ಡಿಸಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ. ಮುಂಬರುವ ಇದೇ ಜೂನ್ 12ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಜೊತೆ ಸಭೆ ಮಾಡಿ ನಮ್ಮ ಸಮಸ್ಯೆ ಇತ್ಯರ್ಥ ಪಡಿಸಬೇಕು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ನೇಕಾರರಿಗೆ 10 ಎಚ್ಪಿ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ದರು. ಹೀಗಾಗಿ ಕೊಟ್ಟ ಮಾತಿನಂತೆ ನಮ್ಮ ಬೇಡಿಕೆಯನ್ನು ಅವರು ಈಡೇರಿಸಲಿ. ಅಲ್ಲಿಯವರೆಗೂ ಕೆಇಬಿ ಅವರು ಯಾರೂ ದಯಮಾಡಿ ನೇಕಾರರ ಮನೆಗೆ ವಿದ್ಯುತ್ ಬಿಲ್ ತುಂಬಿಸಿಕೊಳ್ಳಲು ಬರಬಾರದು” ಎಂದು ಎಚ್ಚರಿಕೆ ನೀಡಿದರು.
ವಿದ್ಯುತ್ ಬಿಲ್ ಕಟ್ಟಲ್ಲ : ನಿನ್ನೆ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ನೇಕಾರರು ವಿದ್ಯುತ್ ಬಿಲ್ ಕಟ್ಟದೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವೇಳೆ ಮಾತನಾಡಿದ ನೇಕಾರ ಮುಖಂಡರು, ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿರುವುದು ಸ್ವಾಗತಾರ್ಹ. ಆದರೆ ಇತ್ತ ನೇಕಾರರ ಜೀವನದೊಂದಿಗೆ ಚೆಲ್ಲಾಟ ಆಡುತ್ತಿರುವ ಸರ್ಕಾರ ದಿಢೀರ್ ಅಂತ ವಿದ್ಯುತ್ ದರ ಹೆಚ್ಚಿಸುವ ಮೂಲಕ ಕರೆಂಟ್ ಶಾಕ್ ನೀಡಿದೆ. ತ್ರಿಫೇಸ್ ವಿದ್ಯುತ್ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ದುಪ್ಪಟ್ಟು ಕಸಿದುಕೊಳ್ಳಲು ಸರ್ಕಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.