ಧಾರವಾಡ: ಗಂಭೀರ ಹೃದಯ ರೋಗದಿಂದ ಬಳಲುತ್ತಿದ್ದ 20 ದಿನದ ಮಗುವಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಧಾರವಾಡದ ನಾರಾಯಣ ಹೃದಾಯಲಯ ನವಜಾತ ಶಿಶುವಿಗೆ ಪುನರ್ಜನ್ಮ ನೀಡಿದೆ.
ಹುಬ್ಬಳ್ಳಿ ಮೂಲದ ಫಾರುಕ್ ಮತ್ತು ಮುಬಿನ್ ದಂಪತಿಯ 20 ದಿನದ ಮಗು ಹುಟ್ಟಿದಾಗ 2.3 ಕೆಜೆ ತೂಕವಿತ್ತು. ಮಗುವಿನ ಹೃದಯದಲ್ಲಿ ರಕ್ತ ಪರಿಚಲನೆ ಸಮಸ್ಯೆ ಕಾರಣದಿಂದ ಕುಟುಂಬದವರು ಮಗುವಿನ ಚಿಂತೆಯಲ್ಲೇ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾಡಿಸಿದರೂ ಅದು ಸರಿಯಾಗಿರಲಿಲ್ಲ. ನಂತರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ, ಅಲ್ಲಿಯ ವೈದ್ಯರು, ನಾರಾಯಣ ಹಾರ್ಟ್ ಸೆಂಟರ್ ಗೆ ರೆಫರ್ ಮಾಡಿದ್ದರು.
ಆಗ ಮಗುವಿನ ಹೃದಯ ರಕ್ತನಾಳದಲ್ಲಿ ಸಮಸ್ಯೆ ಇದೆ ಎಂದು ತಿಳಿದು ಬಂದಿತ್ತು. ರಕ್ತನಾಳದಲ್ಲಿ ಕೇವಲ 3 ಎಂಎಂ ಮಾತ್ರ ಜಾಗವನ್ನು ಹೊಂದಿತ್ತು. ಇದನ್ನು ಚಿಕ್ಕಮಕ್ಕಳ ಹೃದಯ ರೋಗ ತಜ್ಞ ಡಾ. ಅರುಣ ಕೆ. ಬಬ್ಲೇಶ್ವರ, ಮುಖ್ಯ ಹೃದಯ ಶಸ್ತ್ರ ಚಿಕಿತ್ಸಕ ಡಾ. ರವಿವರ್ಮ ಪಾಟೀಲ್ ಮತ್ತು ಹೃದಯ ಅರಿವಳಿಕೆ ತಜ್ಞರ ತಂಡ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನೇರವೇರಿಸಿದ್ದಾರೆ. ಸದ್ಯ ಚಿಕಿತ್ಸೆ ಬಳಿಕ ಮಗು ಆರೋಗ್ಯವಾಗಿದ್ದು, ಮಗುವಿನ ಕುಟುಂಬ ಕೂಡಾ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.