ಹುಬ್ಬಳ್ಳಿ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಕಾರ್ಯದರ್ಶಿ ಹರೀಶ್ ಹಳಪೇಟ ಆಸ್ತಿ ನೋಡಿ ಎಸಿಬಿ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಹುಬ್ಬಳ್ಳಿ, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದ ಧಾರವಾಡದ ಎಸಿಬಿ ಅಧಿಕಾರಿಗಳು ಕೆಐಎಡಿಬಿ ಕಾರ್ಯದರ್ಶಿಯ ಅಪಾರ ಪ್ರಮಾಣದ ಆಸ್ತಿಯನ್ನ ಪತ್ತೆ ಮಾಡುವಲ್ಲಿ ಯಶ್ವಸಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಕೆಐಎಡಿಬಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಹರೀಶ್ ಹಳಪೇಟ ಮನೆಯ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಪತ್ತೆಯಾದ ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದಾರೆ.
ಹರೀಶ ಹಳೆಪೇಟ ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ತುಮಕೂರಿನಲ್ಲಿ ಆಸ್ತಿಗಳಿಕೆ ಮಾಡಿರುವುದು ಬಯಲಿಗೆ ಬಂದಿದೆ. ಅಲ್ಲದೇ ಹರೀಶ ಹೆಸರಿನಲ್ಲಿದ್ದ ಅಪಾರ ಪ್ರಮಾಣದ ಬೆಳ್ಳಿ, ಬಂಗಾರ, ವಾಹನಗಳ ದಾಖಲೆಗಳು ಸಹ ದಾಳಿ ವೇಳೆ ಪತ್ತೆಯಾಗಿವೆ.
ಹರೀಶ್ ಹಳಪೇಟ ಅವರ ಸ್ಥಿರಾಸ್ತಿ ಅಂದಾಜು ಮೌಲ್ಯ ಒಟ್ಟು 1,32,22,550 ರೂ. ಹಾಗೂ 30 ಲಕ್ಷ ರೂ. ಚರಾಸ್ತಿ ಹೊಂದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಲಂ 13(1)(ಬಿ) ಸಹಕಲಂ 13(2) ಲಂಚ ಪ್ರತಿಬಂಧಕ ಕಾಯಿದೆ – 1998 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.