ಬೆಂಗಳೂರು: ರಾಜ್ಯದಲ್ಲಿ ಈವರೆಗೆ 87,501 ಮಂದಿ 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ವಿಕಲಚೇತನರು ಮನೆಯಿಂದಲೇ ಮತದಾನ ಮಾಡಿದ್ದಾರೆ. ಒಟ್ಟು ಶೇ.87.92 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 80 ವರ್ಷಕ್ಕಿಂತ ಮೇಲ್ಪಟ್ಟವರು 80,250 ನೋಂದಾಯಿಸಿಕೊಂಡಿದ್ದು, ಈ ಪೈಕಿ 70,540 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟು ಶೇ.87.90ರಷ್ಟು ಮತದಾನವಾಗಿದೆ.
19,279 ವಿಕಲಚೇತನ ಮತದಾರರು ನೋಂದಾಯಿಸಿಕೊಂಡಿದ್ದು, 16,961 ಮತದಾರರು ಮತ ಚಲಾಯಿಸಿದ್ದಾರೆ. ಶೇ.87.98 ರಷ್ಟು ಮತದಾನವಾಗಿದೆ. ಮನೆಯಿಂದಲೇ ಮತದಾನ ಮಾಡಲು 99,529 ಮಂದಿ ನೋಂದಾಯಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋಗೆ ನಿಯಮದ ಪ್ರಕಾರವೇ ಅನುಮತಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋಗೆ ನಿಯಮದ ಪ್ರಕಾರವೇ ಅನುಮತಿ ನೀಡಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಯಾದರೆ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಧಾನಿ ಮೋದಿ ಸೇರಿದಂತೆ ಇತರೆ ಮುಖಂಡರ ರೋಡ್ ಶೋಗಳಿಗೆ ನಿಯಮಾವಳಿ ಪ್ರಕಾರವೇ ಅನುಮತಿ ನೀಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ರೋಡ್ ಶೋಗೆ ಅನುಮತಿಸಲಾಗಿದೆ. ಒಂದು ವೇಳೆ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಕಂಡು ಬಂದರೆ ನಿಯಮಗಳ ಪ್ರಕಾರವೇ ಕ್ರಮ ಜರುಗಿಸಲಾಗುತ್ತದೆ. ಸ್ಥಳೀಯ ರಿಟರ್ನಿಂಗ್ ಅಧಿಕಾರಿ, ಪೊಲೀಸರ ಅನುಮತಿಯನ್ನು ಪಡೆದುಕೊಳ್ಳಲಾಗಿರುತ್ತದೆ ಎಂದು ಅವರು ಹೇಳಿದರು.
ರೋಡ್ ಶೋ ವೇಳೆಯಲ್ಲಿ ಅಭ್ಯರ್ಥಿಗಳಿದ್ದರೆ, ಅದರ ವೆಚ್ಚವನ್ನು ಅಭ್ಯರ್ಥಿಗಳಿಗೆ ಹಾಕಲಾಗುತ್ತದೆ. ಒಬ್ಬರಿಗಿಂತ ಹೆಚ್ಚು ಮಂದಿ ಇದ್ದರೆ ವೆಚ್ಚವನ್ನು ಸಮವಾಗಿ ಹಂಚಲಾಗುತ್ತದೆ. ರೋಡ್ ಶೋನಲ್ಲಿ ಅಭ್ಯರ್ಥಿಗಳು ಇಲ್ಲದಿದ್ದರೆ ಅದನ್ನು ರಾಜಕೀಯ ಪಕ್ಷಗಳ ವೆಚ್ಚಕ್ಕೆ ಸೇರಿಸಲಾಗುತ್ತದೆ ಎಂದರು. ಇನ್ನೂ ವಲಸೆ ಹೋಗಿರುವವರು ತಮ್ಮ ಕ್ಷೇತ್ರಕ್ಕೆ ಬಂದು ಮತ ಚಲಾಯಿಸಬಹುದು. ವಲಸೆ ಹೋಗಿರುವವರಿಗೆ ಮತದಾನ ಮಾಡಲು ಚುನಾವಣಾ ಆಯೋಗವು ಸಹ ಜಾಗೃತಿ ಮೂಡಿಸುತ್ತಿದೆ. ಸ್ವಯಂ ಪ್ರೇರಿತವಾಗಿ ಕ್ಷೇತ್ರಕ್ಕೆ ಬಂದು ಮತದಾನ ಮಾಡಬೇಕು. ಆದರೆ, ಅವರನ್ನು ಕರೆತರಲು ವಾಹನಗಳ ವ್ಯವಸ್ಥೆ ಮಾಡುವಂತಿಲ್ಲ. ಅಂತಹ ಪ್ರಕರಣಗಳು ಕಂಡು ಬಂದರೆ ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ತಿಳಿಸಿದರು.