Breaking News

ತಂದೆಯ ಜಮೀನು ಅಡವಿಟ್ಟು ವಿವಾಹ ಮಾಡಿದ್ರೂ ಮಗಳಿಗೆ ಆಸ್ತಿಯಲ್ಲಿ ಸಮಾನ ಹಕ್ಕಿದೆ: ಹೈಕೋರ್ಟ್

Spread the love

ಬೆಂಗಳೂರು : ತಂಗಿಯ ವಿವಾಹಕ್ಕಾಗಿ ಜಮೀನು ಅಡಮಾನ ಇಟ್ಟು ಪಡೆದ ಸಾಲ ಈವರೆಗೂ ತೀರಿಲ್ಲ. ಹೀಗಾಗಿ ತಂದೆಯ ಆಸ್ತಿಯಲ್ಲಿ ಸಹೋದರಿಗೆ ಆಸ್ತಿಯಲ್ಲಿ ಭಾಗ ಕೇಳುವ ಹಕ್ಕಿಲ್ಲ ಎಂಬುದಾಗಿ ಸಹೋದರನ ವಾದ ತಿರಸ್ಕರಿಸಿರುವ ಹೈಕೋರ್ಟ್, ತಂದೆಯ ಆಸ್ತಿಯಲ್ಲಿ ಮಗಳಿಗೂ ಸಮಾನ ಹಕ್ಕಿದೆ ಎಂದು ತಿಳಿಸಿದೆ.

 

ತುಮಕೂರು ಜಿಲ್ಲೆಯ ಯಲ್ಲಾಪುರ ಗ್ರಾಮದ ನಿವಾಸಿಗಳಾದ ವೆಂಕಟೇಶ ಮತ್ತು ಅವರ ತಾಯಿ ವೆಂಕಟಲಕ್ಷ್ಮಮ್ಮ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ತಂದೆಯ ಜಮೀನು ಅಡಮಾನವಿಟ್ಟು ಸಹೋದರಿಗೆ ಮದುವೆ ನೆರವೇರಿಸಿದ್ದು, ಚಿನ್ನಾಭರಣ ಸಹ ಕೊಡಿಸಿದ್ದಾರೆ. ಬಳಿಕ ತಂದೆಯ ಸಾಲ ತೀರಿಸಿ, ಜಮೀನು ಹಿಂದಕ್ಕೆ ಪಡೆಯಲಾಗಿದೆ. ಆದ್ದರಿಂದ ಸಹೋದರಿಗೆ ತಂದೆಯ ಆಸ್ತಿ ಮೇಲೆ ಸಮಾನ ಹಕ್ಕು ಇಲ್ಲ ಮತ್ತು ಆಕೆಗೆ ಆಸ್ತಿಯಲ್ಲಿ ಪಾಲು ಕೊಡಲಾಗದು ಎಂಬ ವಾದ ತಿರಸ್ಕರಿಸಿದ ಹೈಕೋರ್ಟ್, ತಂದೆಯ ಆಸ್ತಿಯಲ್ಲಿ ಪುತ್ರನ ಜೊತೆಗೆ ಪುತ್ರಿಗೂ ಸಮಾನ ಪಾಲಿದೆ ಎಂದು ಆದೇಶಿಸಿತು.

ವಿನೀತಾ ಶರ್ಮಾ ಪ್ರಕರಣದಲ್ಲಿ ‘ತಂದೆಯ ಆಸ್ತಿಯಲ್ಲಿ ಪುತ್ರನಿಗೆ ಸರಿಸಮನಾದ ಪಾಲು ಪಡೆಯಲು ಪುತ್ರಿ ಸಹ ಅರ್ಹರಾಗಿರುತ್ತಾರೆ’ ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅದರಂತೆ ಈ ಪ್ರಕರಣದಲ್ಲಿ ಮೇಲ್ಮನವಿದಾರ ವೆಂಕಟೇಶ ಅವರ ಸೋದರತ್ತೆಯಾದ ಲಕ್ಷ್ಮಿದೇವಮ್ಮ ಸಹ ಅವರ ತಂದೆಯ ಆಸ್ತಿಯಲ್ಲಿ ಪಾಲು ಹೊಂದಲು (ಸಹೋದರ ಗೋವಿಂದಯ್ಯಗೆ ಸರಿಸಮಾನವಾಗಿ) ಅರ್ಹರಾಗಿದ್ದಾರೆ ಎಂದು ಆದೇಶಿಸಿದೆ.

ತಂದೆ ಕಲಗಿರಿಯಪ್ಪ ಸಾಲ ತೀರಿಸಿದ ಕೂಡಲೇ ವ್ಯಾಜ್ಯಕ್ಕೆ ಸಂಬಂಧಿಸಿದ ಜಮೀನಿನ ಮೇಲೆ ವೈಯಕ್ತಿಕ ಹಕ್ಕು ಸೃಷ್ಟಿಸುವುದಿಲ್ಲ. ಇನ್ನೂ ವಿವಾದಿತ ಜಮೀನು ಗೋವಿಂದಯ್ಯ ಅವರ ಸ್ವಯಾರ್ಜಿತ ಎಂಬುದನ್ನು ಸಾಬೀತುಪಡಿಸುವಲ್ಲಿ ಮೇಲ್ಮನವಿದಾರರು ವಿಫಲವಾಗಿದ್ದಾರೆ ಎಂದು ಅಭಿಪ್ರಾಯಪಟ್ಟು, ಕಲಗಿರಿಯಪ್ಪ ಆಸ್ತಿಯಲ್ಲಿ ಲಕ್ಷ್ಮೀದೇವಮ್ಮ ಅವರಿಗೆ ಪಾಲಿದೆ ಎಂದು ಹೈಕೋರ್ಟ್​ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ತುಮಕೂರಿನ ಯಲ್ಲಾಪುರ ಗ್ರಾಮದ ನಿವಾಸಿಯಾಗಿದ್ದ ಕಲಗಿರಿಯಪ್ಪ ಎಂಬುವರಿಗೆ ಲಕ್ಷ್ಮೀದೇವಮ್ಮ ಮತ್ತು ಕೆ. ಗೋವಿಂದಯ್ಯ ಎಂಬ ಮಕ್ಕಳು ಇದ್ದರು. ತಂದೆಯ ಆಸ್ತಿಯಲ್ಲಿ ಪಾಲು ಕೋರಿ 2011ರಲ್ಲಿ ಸಿವಿಲ್ ದಾವೆ ಹೂಡಿದ್ದ ಲಕ್ಷ್ಮೀದೇವಮ್ಮ, ತಂದೆ ಕಲಗಿರಿಯಪ್ಪ ಅವರ ಹೆಸರಿನಲ್ಲಿ 1943ರಿಂದ 1949ವರೆಗೆ ವಿವಾದಿತ ಜಮೀನು ನೋಂದಣಿಯಾಗಿದೆ. 1964ರಲ್ಲಿ ತಂದೆ ಮೃತಪಟ್ಟಿದ್ದಾರೆ. ತಂದೆಯ ಆಸ್ತಿಯು ಸಹೋದರ ಗೋವಿಂದಯ್ಯನ ಸ್ವಾಧೀನದಲ್ಲಿದೆ. ಸಹೋದರ ಸಹ ಸಾವನ್ನಪ್ಪಿದ್ದು, ಆತನ ಪತ್ನಿ ಮತ್ತು ಮಕ್ಕಳು ಆಸ್ತಿ ಅನುಭವಿಸುತ್ತಿದ್ದಾರೆ. ಹಾಗಾಗಿ, ಆಸ್ತಿಯಲ್ಲಿ ತನಗೂ ಪಾಲು ನೀಡುವಂತೆ ಸಹೋದರನ ಪುತ್ರ ಮತ್ತು ಪತ್ನಿಗೆ (ಮೇಲ್ಮನವಿದಾರರು) ಆದೇಶಿಸಬೇಕು ಎಂದು ಕೋರಿದ್ದರು.


Spread the love

About Laxminews 24x7

Check Also

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ ‌ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘ ಪ್ರತಿಭಟನೆ

Spread the loveಬೆಳಗಾವಿ ;ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ