ಹುಬ್ಬಳ್ಳಿ: ವಿಧಾನಾಸಭೆ ಚುನಾವಣೆ ಘೋಷಣೆಯಾಗಿದ್ದರಿಂದ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಈಗಾಗಲೇ ಕೆಲ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದು, ಅನೇಕರಿಗೆ ಪಕ್ಷದಿಂದ ಟಿಕೆಟ್ ದೊರೆತ್ತಿದೆ.
ಇನ್ನು ಕೆಲವರಿಗೆ ಟಿಕೆಟ್ ದೊರೆತ್ತಿಲ್ಲ. ಇದರ ಮಧ್ಯೆ ಇನ್ನು ಕೆಲ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆಗಿಲ್ಲ. ಹೀಗಾಗಿ ಶೆಟ್ಟರ್ ಟಿಕೆಟ್ ಘೋಷಣೆ ವಿಳಂಬ ಹಿನ್ನೆಲೆ ಬೆಂಬಲಿಗರ ಸಭೆಗೆ ತಯಾರಿ ನಡೆಸಿದ್ದರು. ಇದರ ಮಧ್ಯೆ ಶೆಟ್ಟರ್ ನಿವಾಸಕ್ಕೆ ಜೋಶಿ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಶೆಟ್ಟರ್ ನಿವಾಸಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ಮಾಡಿ ಮನವೊಲಿಸುವ ಯತ್ನ ನಡೆಯುತ್ತಿದೆ. ಬಾದಾಮಿ ನಗರದಲ್ಲಿರುವ ಶೆಟ್ಟರ್ ನಿವಾಸದಲ್ಲಿ ಜೋಶಿ ಗೌಪ್ಯ ಸಭೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಭೇಟಿ ಬಳಿಕ ಬೆಂಬಲಿಗರ ಸಭೆ ಕೈಗೊಳ್ಳಲಿದ್ದಾರೆ. ಇನ್ನು ಸ್ವಲ್ಪ ಸಮಯದಲ್ಲಿ ಬೆಂಬಲಿಗರ ಸಭೆ ನಡೆಯಲಿದ್ದು, ಬೆಂಬಲಿಗರ ಸಭೆ ಮೂಲಕ ಶಕ್ತಿ ಪ್ರದರ್ಶನಕ್ಕೆ ಶೆಟ್ಟರ್ ಮುಂದಾಗಿದ್ದಾರೆ. ಸಭೆಯಲ್ಲಿ ಸ್ಪರ್ಧೆಯ ಕುರಿತು ಶೆಟ್ಟರ್ ಅವರ ಅಂತಿಮ ನಿರ್ಧಾರ ಘೋಷಣೆಗೆ ತಯಾರಿ ನಡೆಯುತ್ತಿದೆ. ಸಭೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಮೂಲಕ ಒತ್ತಡ ತಂತ್ರಕ್ಕೆ ಮಾಜಿ ಸಿಎಂ ಶೆಟ್ಟರ್ ಮೊರೆ ಹೋಗುತ್ತಿದ್ದಾರೆ.
16 ಪಾಲಿಕೆ ಸದಸ್ಯರಿಂದ ರಾಜೀನಾಮೆ: ಈಗಾಗಲೇ ಸೆಂಟ್ರಲ್ ಕ್ಷೇತ್ರದ 16 ಪಾಲಿಕೆ ಸದಸ್ಯರಿಂದ ರಾಜೀನಾಮೆ ನೀಡಿದ್ದಾರೆ. ಸೆಂಟ್ರಲ್ ಕ್ಷೇತ್ರದ ವಿವಿಧ ಪದಾಧಿಕಾರಿಗಳಿಂದಲೂ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಶತಾಯಗತಾಯ ಸ್ಪರ್ಧಿಸೋದಾಗಿ ತಿಳಿಸಿರುವ ಶೆಟ್ಟರ್ ನಡೆ ತೀವ್ರ ಕುತೂಹಲ ಕೆರಳಿಸಿದೆ.
ಆಪರೇಷನ್ ಹಸ್ತ: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ನೀಡಲು ವಿಳಂಬವಾಗುತ್ತಿರುವುದರಿಂದ ಬಿಜೆಪಿ ಹೈಕಮಾಂಡ್ ನಿಲುವಿನಿಂದ ಬೇಸತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ಉತ್ತರ ಕರ್ನಾಟಕ ಭಾಗದ ಬಿಜೆಪಿಯ ಹಿರಿಯ ಲಿಂಗಾಯತ ಸಮುದಾಯದ ಮುಖಂಡರಾದ ಜಗದೀಶ್ ಶೆಟ್ಟರ್ ಅವರನ್ನು ಸೆಳೆಯಲು ಕಾಂಗ್ರೆಸ್ ಪಕ್ಷ ಆಪರೇಷನ್ ಹಸ್ತ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಳಗಾವಿ ಜಿಲ್ಲೆಯ ಪ್ರಭಾವಶಾಲಿ ಮುಖಂಡರಾದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಸೆಳೆದ ಮಾದರಿಯಲ್ಲಿಯೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಸಂಬಂಧ ಸರ್ವ ರೀತಿಯ ಪ್ರಯತ್ನವನ್ನು ಪಕ್ಷದ ಮುಖಂಡರು ನಡೆಸಿದ್ದಾರೆ ಎನ್ನಲಾಗ್ತಿದೆ.
ಭಾರತೀಯ ಜನತಾ ಪಕ್ಷವು ಹಿರಿಯ ಮುಖಂಡರಾದ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡದೇ ಅವಮಾನಿಸುತ್ತಿರುವುದನ್ನು ಮನಗಂಡ ಕಾಂಗ್ರೆಸ್ ಪಕ್ಷದ ನಾಯಕರು ಜಗದೀಶ್ ಶೆಟ್ಟರ್ ಅವರಿಗೆ ಪಕ್ಷಕ್ಕೆ ಸೇರಲು ಆಫರ್ ನೀಡಿದ್ದಾರೆಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಕಾಂಗ್ರೆಸ್ ಪಕ್ಷದ ಲಿಂಗಾಯತ ಸಮುದಾಯದ ಹಿರಿಯ ಮುಖಂಡರಾದ ಹಾಗೂ ಶೆಟ್ಟರ್ ಕುಟುಂಬದ ಬೀಗರೂ ಆಗಿರುವ ಶಾಮನೂರು ಶಿವಶಂಕರಪ್ಪ , ಮಾಜಿ ಸಚಿವ ಎಚ್ ಕೆ ಪಾಟೀಲ್, ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವರು ಶೆಟ್ಟರ್ ಜೊತೆ ತಮ್ಮದೇ ಆದ ನೆಟ್ ವರ್ಕ್ ಮೂಲಕ ಸಂಪರ್ಕ ಸಾಧಿಸಿ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಮನವೊಲಿಸಲು ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಶೆಟ್ಟರ್ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಇಂದಿನ ಸಭೆ ಬಳಿಕ ನಿರ್ಧಾರವಾಗಲಿದೆ.