ಹಾವೇರಿ/ಧಾರವಾಡ: ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಇಂದು ನಾಮಪತ್ರ ಸಲ್ಲಿಸಿದರು.
ಇಂದು ಸಿಎಂ ಬೆಂಗಳೂರಿನಿಂದ ಶಿಗ್ಗಾಂವಿಗೆ ಆಗಮಿಸಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಂಸದ ಶಿವಕುಮಾರ್ ಉದಾಸಿ, ಸಚಿವ ಸಿ.ಸಿ ಪಾಟೀಲ್, ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡರು ಮತ್ತು ಕುಟುಂಬಸ್ಥರು ಸಿಎಂ ಬೊಮ್ಮಾಯಿಗೆ ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಸಿಎಂ, ಕ್ಷೇತ್ರದಲ್ಲಿ ಈ ಹಿಂದಿನಕ್ಕಿಂತಲೂ ಹೆಚ್ಚಿನ ಬೆಂಬಲ ಇದೆ. ತಾಲೂಕಿನ ಅಭಿವೃದ್ಧಿಯನ್ನು ಕ್ಷೇತ್ರದ ಜನರು ನೋಡಿದ್ದು, ಅಭೂತಪೂರ್ವ ಬೆಂಬಲ ಸಿಕ್ಕಿದೆ. ಚುನಾವಣೆ ಅಂದ್ರೆನೇ ಕುಸ್ತಿ. ಎದುರಾಳಿ ಯಾರೇ ಬಂದ್ರೂ ಪರವಾಗಿಲ್ಲ ಎಂದು ತಿಳಿಸಿದರು.
ಇನ್ನು ಇದೇ ವೇಳೆ ಪಕ್ಷದಲ್ಲಿನ ನಾಯಕರ ಅಸಮಧಾನದ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಹಾಲಿ ಶಾಸಕರಿಗೆ ಟಿಕೆಟ್ ಸಿಗದಿದ್ದಾಗ ಬಂಡಾಯ ಸಹಜ. ಕೊನೆಯ ಪಟ್ಟಿ ಬಿಡುಗಡೆಯಾಗಲಿದೆ. ಎಲ್ಲವೂ ಶಮನ ಆಗುತ್ತದೆ ಎಂದು ಹೇಳಿದರು.
ಇದಕ್ಕೂ ಮುನ್ನ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಸಿಎಂ ಬೊಮ್ಮಾಯಿ ಅವರು ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಶ್ರೀಗಳ ದರ್ಶನ ಪಡೆದರು. ನಂತರ ಅಮರಗೋಳದಲ್ಲಿನ ತಂದೆ ತಾಯಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಶಿಗ್ಗಾಂವಿಗೆ ಆಗಮಿಸಿದ್ದರು.
ಶಿಗ್ಗಾಂವಿ ಪುರಸಭೆ ಬಳಿಯ ಚನ್ನಮ್ಮ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಜೊತೆಗೆ ಗ್ರಾಮ ದೇವತೆ ದರ್ಶನ ಪಡೆದು ನಾಮಪತ್ರ ಸಲ್ಲಿಸಲು ತಹಶೀಲ್ದಾರ್ ಕಚೇರಿಗೆ ತೆರಳಿದರು.