ರಾಯಚೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಗುಳೆ ಹೋದವರು ಸ್ವಗ್ರಾಮಕ್ಕೆ ವಾಪಾಸ್ ಆಗಮಿಸುತ್ತಿದ್ದು, ಇಂತಹವರಿಗೆ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.
ಕೊರೊನಾ ಭೀತಿಯಿಂದ ಬೆಂಗಳೂರಿನಿಂದ ಬಂದವರಿಗೆ ಹೋಂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಬೆಂಗಳೂರಿನಿಂದ ವಾಪಸ್ ಆಗುವವರಿಗೆ ಹೋಂ ಕ್ವಾರಂಟೈನ್ ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿಗಳ ಮೂಲಕ 14 ದಿನಗಳ ಹೋಂ ಕ್ವಾರಂಟೈನ್ ಬಗ್ಗೆ ಪ್ರತಿ ಗ್ರಾಮಗಳಲ್ಲಿ ಮೈಕ್ ಮೂಲಕ ಪ್ರಚಾರ ಮಾಡಿ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗುತ್ತಿದೆ.

ಬೆಂಗಳೂರಿನಿಂದ ಬಂದವರ ಜೊತೆ ಸಂಪರ್ಕ ಬೇಡ, ಅಂತರ ಕಾಯ್ದುಕೊಳ್ಳಿ ಎಂದು ಗ್ರಾಮ ಪಂಚಾಯತಿ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ಹೋಂ ಕ್ವಾರಂಟೈನ್ ಅವಧಿ ಮುಗಿಯುವವರೆಗೆ ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ. ಮತ್ತೊಂದೆಡೆ ಕೊರೊನಾ ಭೀತಿಯಿಂದ ಭಯದಲ್ಲಿರುವ ಗ್ರಾಮೀಣ ಭಾಗದ ಜನರು ಬೆಂಗಳೂರಿನಿಂದ ಬಂದವರಿಂದ ನಮಗೆ ಭಯ ಇದೆ ಎನ್ನುತ್ತಿದ್ದಾರೆ. ಗುಳೆ ಕೂಲಿ ಕಾರ್ಮಿಕರು ಸ್ವಗ್ರಾಮದಲ್ಲಿ ಇರಬೇಕಾದರೆ ಹೋಂ ಕ್ವಾರಂಟೈನ್ ನಿಯಮ ಪಾಲಿಸಬೇಕು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

ಜಿಲ್ಲೆಗೆ ಇಷ್ಟು ದಿನ ಮಹಾರಾಷ್ಟ್ರದ ನಂಟು ಕಂಟಕವಾಗಿತ್ತು. ಈಗ ಬೆಂಗಳೂರು, ಕಲಬುರ್ಗಿ ಸೇರಿದಂತೆ ಹೊರ ಜಿಲ್ಲೆಗಳಿಂದ ಬರುವವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಬೇರೆ ಜಿಲ್ಲೆಯಿಂದ ಬರುವವರ ಮೇಲೆ ಜಿಲ್ಲಾಡಳಿತ ನಿಗಾವಹಿಸಿದೆ. ಪ್ರತಿ ಗ್ರಾಮದಲ್ಲೂ ಹೊರ ಜಿಲ್ಲೆಯಿಂದ ಬಂದಿರುವವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಬೆಂಗಳೂರಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಕೂಲಿ ಕಾರ್ಮಿಕರು, ಬೇರೆ ಬೇರೆ ಉದ್ಯೋಗಿಗಳು ಕೆಲಸ ತೊರೆದು ಜಿಲ್ಲೆಗೆ ಮರಳುತ್ತಿದ್ದಾರೆ. ಹೀಗಾಗಿ ಹೊರ ಜಿಲ್ಲೆ ಹಾಗೂ ಹೊರರಾಜ್ಯದಿಂದ ಬಂದವರಿಗೆಲ್ಲರಿಗೂ ಕ್ವಾರಂಟೈನ್ ಮಾಡಲಾಗುತ್ತಿದೆ.
https://youtu.be/ZwocKpMtUVY
Laxmi News 24×7