ಚಿಕ್ಕೋಡಿ: ಕಣ್ಣು ಹಾಯಿಸಿದಷ್ಟು ಜನ ಜಂಗುಳಿ, ಎಲ್ಲಿ ನೋಡಿದರಲ್ಲಿ ವಾಹನಗಳ ಸಾಲು, ಕರ್ನಾಟಕ-ಮಹಾರಾಷ್ಟ್ರ ಬಾಂಧವ್ಯದ ಜೊತೆಗೆಯೇ ಇಡೀ ಭಾರತದ ಸಂತರು, ತಜ್ಞರು ಸಮಾಗಮದಲ್ಲಿ ಮಹಿಳೆಯರದ್ದೇ ಸಿಂಹಪಾಲು.
ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಮಠದಲ್ಲಿ ಹಮ್ಮಿಕೊಂಡಿರುವ ಬೃಹತ್ ಪಂಚಮಹಾಭೂತ ಲೋಕೋತ್ಸವದಲ್ಲಿ ಶುಕ್ರವಾರ ನಡೆದ ಮಹಿಳಾ ಲೋಕೋತ್ಸವದಲ್ಲಿ ಕಂಡು ಬಂದ ಚಿತ್ರಣವಿದು.
ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದ ಲಕ್ಷಾಂತರ ಮಹಿಳೆಯರು ಕನೇರಿ ಮಠದತ್ತ ಆಗಮಿಸಿ ಲೋಕೋತ್ಸವಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಇಡೀ ಕನೇರಿ ಮಠದ ಸುತ್ತಮುತ್ತ ಸುಮಾರು 600 ಎಕರೆ ಪ್ರದೇಶದಲ್ಲಿ ಭೂಮಿ, ನೀರು, ವಾಯು, ಅಗ್ನಿ, ಆಕಾಶದ ಚಿತ್ರಣ ಅನಾವರಣಗೊಂಡಿದೆ. ಐದು ಪಂಚಮಹಾಭೂತ ವೀಕ್ಷಣೆಗೆ ಜನ ಮುಗಿಬಿದ್ದಿದ್ದಾರೆ. ಶುಕ್ರವಾರ ಒಂದೇ ದಿನ ಅಂದಾಜು ನಾಲ್ಕೈದು ಲಕ್ಷದಷ್ಟು ಜನ ಸೇರಿದ್ದಾರೆ. ದಿನದಿಂದ ದಿನಕ್ಕೆ ಲೋಕೋತ್ಸವ ನೋಡಲು ಜನರ ಸಂಖ್ಯೆ ಹೆಚ್ಚುತ್ತಿದೆ.
ನೆತ್ತಿ ಸುಡುವ ಬಿಸಿಲು ಲೆಕ್ಕಿಸದೇ ಜನರು ಉತ್ಸಾಹದಿಂದ ಲೋಕೋತ್ಸವ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಕೃಷಿ ದರ್ಶನದ ಚಿತ್ರಣ ರೈತಾಪಿ ವರ್ಗದ ಜನರನ್ನು ಆಕರ್ಷಿಸುತ್ತಿದೆ. ಬೃಹತ್ ಕಾರ್ಯಕ್ರಮ ಯಾವ ಮೈದಾನದಲ್ಲಿ ನಡೆದಿಲ್ಲ, ಇದೊಂದು ಕೃಷಿ ಭೂಮಿಯಲ್ಲಿ ನಡೆದಿರುವ ವಿಶೇಷ. ಸಾವಯವ ಪದ್ಧತಿಯಲ್ಲಿ ಬೆಳೆದಿರುವ ವಿವಿಧ ಜಾತಿ ಗಿಡಗಳ ಸಮ್ಮುಖದಲ್ಲಿ ಲೋಕೋತ್ಸವದ ಮಳಿಗೆ ಇವೆ. ತಂಪಾದ ಗಿಡಗಳ ನೆರಳಿನ ಮಧ್ಯದಲ್ಲಿ ಭೂಮಿ, ನೀರು, ವಾಯು, ಅಗ್ನಿ, ಆಕಾಶದ ಪಂಚಮಹಾಭೂತ ಚಿತ್ರಣ ವೀಕ್ಷಿಸಲು ಅನುಕೂಲ ಕಲ್ಪಿಸಲಾಗಿದೆ.
ಸಾವಯವ ಅಡುಗೆ ತಯಾರಿ: ಪಂಚಮಹಾಭೂತ ಲೋಕೋತ್ಸವಕ್ಕೆ ಆಗಮಿಸುವ ಲಕ್ಷೋಪಲಕ್ಷ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಸಾವಯವ ಪದ್ಧತಿಯಲ್ಲಿಯೇ ಬೆಳೆದ ತರಕಾರಿಯಿಂದ ಅಡುಗೆ ಸಿದ್ಧವಾಗುತ್ತಿದೆ. ನಾಡಿನಾದ್ಯಂತ ಭಕ್ತರು ಕೊಟ್ಟ ರೊಟ್ಟಿ, ಚಪಾತಿ ಹೊರತುಪಡಿಸಿ ಉಳಿದೆಲ್ಲ ಪದಾರ್ಥಗಳು ಭೋಜನ ಮಳಿಗೆಯಲ್ಲಿಯೇ ಸಿದ್ಧಪಡಿಸಲಾಗುತ್ತಿದೆ. ಗಣ್ಯರು, ಸಂತರು, ಸಾರ್ವಜನಿಕರಿಗೆ ಪ್ರತ್ಯೇಕ ಊಟದ ಮಳಿಗೆಯಲ್ಲಿ ಭೋಜನದ ವ್ಯವಸ್ಥೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರೂ ಶೇಂಗಾ ಹೋಳಿಗೆ, ಮಾದಲಿ, ಜೋಳದ ರೊಟ್ಟಿ, ಚಪಾತಿ, ಎರಡರಿಂದ ಮೂರು ಪಲೆÂ, ಮಜ್ಜಿಗೆ, ಮೊಸರು, ಅನ್ನ ಸಾಂಬಾರಿನ ಭೋಜನದ ಸವಿ ಸವಿಯುತ್ತಿದ್ದಾರೆ.
ಪಂಚಮಹಾಭೂತ ಲೋಕೋತ್ಸವ ಜಾತ್ರೆಯಾಗದೇ ಇದೊಂದು ಸಾಮಾಜಿಕ ಹೊಣೆಗಾರಿಕೆ ಆಗಬೇಕು. ಭೂಮಿ, ನೀರು, ವಾಯು, ಅಗ್ನಿ, ಆಕಾಶ ಉಳಿಸುವತ್ತ ಯುವಕರು ಚಿಂತಿಸಬೇಕಿದೆ. ಪರಿಸರ ಉಳಿದರೆ ಮಾತ್ರ ಜೀವನ ಎನ್ನುವುದು ಜನರಿಗೆ ತಿಳಿಸುವ ಉದ್ದೇಶದಿಂದ ಪಂಚಮಹಾಭೂತ ಲೋಕೋತ್ಸವ ಹಮ್ಮಿಕೊಳ್ಳಲಾಗಿದೆ.
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿ
ಕನೇರಿ ಕಾಡಸಿದ್ದೇಶ್ವರ ಮಠದಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಮ್ಮ ಇಡೀ ಪೃಥ್ವಿ, ದೇಹ ಪಂಚಮಹಾಭೂತದಿಂದ ನಿರ್ಮಾಣವಾಗಿದ್ದು, ಐದು ತತ್ವಗಳಿಂದ ಕೂಡಿದ ಈ ಪ್ರಕೃತಿ ಉಳಿಸಿಕೊಂಡು ಹೋಗುವುದು ಮುಖ್ಯ. 600 ಎಕರೆ ಪ್ರದೇಶದಲ್ಲಿ ಐದು ತತ್ವಗಳ ಪ್ರದರ್ಶನ ನಡೆಯುತ್ತಿದೆ. ದಿನದಿಂದ ದಿನಕ್ಕೆ 5 ಲಕ್ಷಕ್ಕಿಂತ ಹೆಚ್ಚಿನ ಜನ ವೀಕ್ಷಣೆ ಮಾಡುತ್ತಿದ್ದಾರೆ. ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ಕೊಡಬೇಕೆನ್ನುವುದು ಇದರ ಉದ್ದೇಶ. ಈ ಪಂಚಮಹಾಭೂತ ಲೋಕೋತ್ಸವ ಸುವರ್ಣಾಕ್ಷರದಲ್ಲಿ ಬರೆದಿಡುವ ಕಾರ್ಯಕ್ರಮವಾಗಿದೆ.
ಶಶಿಕಲಾ ಜೊಲ್ಲೆ, ಸಚಿವೆ
ಯಕ್ಸಂಬಾ ಜೊಲ್ಲೆ ಗ್ರುಪ್ ಸೇವೆ: ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಗ್ರುಪ್‌ನ ಸುಮಾರು 400 ಸಿಬ್ಬಂದಿ ಪಂಚಮಹಾಭೂತ ಲೋಕೋತ್ಸವದಲ್ಲಿ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಡೀ ಲೋಕೋತ್ಸವದ ಭೋಜನ ವ್ಯವಸ್ಥೆಯಲ್ಲಿ ಜೊಲ್ಲೆ ಗ್ರುಪ್ ಸಿಬ್ಬಂದಿ ಮುಂಚೂಣಿಯಲ್ಲಿ ನಿಂತು ಕೆಲಸ ನಿರ್ವಹಿಸುತ್ತಿದ್ದಾರೆ.