ಹಾವೇರಿ: ಕಳೆದ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕೊಟ್ಟಂತೆಯೇ, ಈ ಬಾರಿಯ ಬಜೆಟ್‌ನಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ತವರು ಜಿಲ್ಲೆ ಹಾವೇರಿಗೆ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಹೊಸದಾಗಿ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರ ಸ್ಥಾಪನೆ, ಸವಣೂರಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆ, ಹಾವೇರಿಯಲ್ಲಿ ಆಧುನಿಕ ತಂತ್ರಜ್ಞಾನ ಆಧರಿತ ಹೂವಿನ ಚಿಲ್ಲರೆ ಮಾರುಕಟ್ಟೆ ನಿರ್ಮಾಣ, ಬಂಕಾಪುರದ ನಗರೇಶ್ವರ ದೇವಸ್ಥಾನವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಲಾಗಿದೆ.
ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿರುವ ಪಾಲಿಟೆಕ್ನಿಕ್ ಕಾಲೇಜ್ ಅನ್ನು ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಆಗಿ ಉನ್ನತೀಕರಣ, ಹಾವೇರಿಯಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ, ‘ಐಐಟಿ’ ಮಾದರಿಯಲ್ಲಿ ‘ಕೆಐಟಿ’ಯಾಗಿ ಉನ್ನತೀಕರಿಸಲು ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆಯ್ಕೆ ಹಾಗೂ ಹಾವೇರಿ ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕ್ರಮವಹಿಸುವ ಮೂಲಕ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಆದ್ಯತೆ ನೀಡಲಾಗಿದೆ.
ಹಾವೇರಿ ಮತ್ತು ರಾಣೆಬೆನ್ನೂರು ನಗರದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ, ಹಾವೇರಿಯಲ್ಲಿ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಪ್ರಯೋಗಾಲಯ ಸ್ಥಾಪನೆ, ಹಾವೇರಿಯಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್ ಅನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಕ್ರಮ, ಹಾವೇರಿಯಲ್ಲಿ ₹90 ಕೋಟಿ ವೆಚ್ಚದಲ್ಲಿ ಮೆಗಾಡೇರಿ ಸ್ಥಾಪನೆಗೆ ಕ್ರಮವಹಿಸಲಾಗಿದೆ ಎಂದು ಸಿಎಂ ಬಜೆಟ್‌ನಲ್ಲಿ ತಿಳಿಸಿದ್ದಾರೆ.
ಹಾನಗಲ್ ತಾಲ್ಲೂಕಿನ ಬಾಳಂಬೀಡ ಕೆರೆ ತುಂಬಿಸುವ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸುವುದು ಮತ್ತು ₹2611 ಕೋಟಿ ವೆಚ್ಚದಲ್ಲಿ ಚಿತ್ರದುರ್ಗ-ದಾವಣಗೆರೆ-ಹಾವೇರಿ ಮಾರ್ಗದ ಆರು ಪಥದ ಹೆದ್ದಾರಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.