ಶ್ರೀನಗರ: ಜಮ್ಮು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ, ಮಾಜಿ ಸಿಎಂ ಮೆಹಬೂಬಾ ಮುಫ್ತಿಯರನ್ನು ಗೃಹಬಂಧನದಿಂದ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 5ರಂದು 370ನೇ ವಿಧಿ ರದ್ದುಪಡಿಸಿದ ಬಳಿಕ ಮುಫ್ತಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು.ಬಿಡುಗಡೆಯಾಗುತ್ತಿದ್ದಂತೆ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಮೆಹಬೂಬಾ ಮುಫ್ತಿ ಕಿಡಿ ಕಾರಿದ್ದಾರೆ. ಪೂರ್ತಿ ಕಪ್ಪು ಬಣ್ಣದ ವಿಡಿಯೋವನ್ನು ಹಂಚಿಕೊಂಡಿರುವ ಅವರು, ಆಡಿಯೋ ಮೆಸೇಜ್ ಮೂಲಕ ಕಿಡಿಕಾರಿದ್ದಾರೆ.
ಒಂದೂ ವರ್ಷಕ್ಕೂ ಹೆಚ್ಚು ಕಾಲ ಅಂದರೆ 14 ತಿಂಗಳ ಬಳಿಕ ಬಿಡುಗಡೆ ಹೊಂದಿದ್ದೇನೆ. 370ನೇ ವಿಧಿ ರದ್ದುಗೊಳಿಸಿದ ಕೇಂದ್ರದ ಕ್ರೂರ ನಿರ್ಧಾರದ ಬಗ್ಗೆ ನಾನು ಯಾವಾಗಲೂ ಯೋಚಿಸುತ್ತಿದ್ದೇನೆ. ಸರ್ಕಾರ ವಿಶೇಷ ಸ್ಥಾನಮಾನವನ್ನು ಮರಳಿಸಬೇಕು ಹಾಗೂ ದೇಶದ ಹಲವು ಭಾಗಗಳಲ್ಲಿ ಜೈಲಿನಲ್ಲಿ ಬಳಲುತ್ತಿರುವವರನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಇದು ಸುಲಭವಲ್ಲ ಎಂದು ನನಗೆ ತಿಳಿದಿದೆ. ಆದರೆ ನಾವೆಲ್ಲರೂ ಹೋರಾಡಬೇಕಿದೆ ಎಂದು ಗುಡುಗಿದ್ದಾರೆ.
ಇತ್ತೀಚೆಗೆ ಅವರು ಮಗಳು ಇಲ್ತಿಝಾ ಮುಫ್ತಿ ಸಹ ಮೆಹಬೂಬಾ ಮುಫ್ತಿ ಟ್ವಿಟ್ಟರ್ ಖಾತೆ ಮೂಲಕ ಅವರು ಬಿಡುಗಡೆಯಾಗುವುದನ್ನು ಖಚಿತಪಡಿಸಿದ್ದರು. ಕೊನೆಗೂ ಮುಫ್ತಿಯವರ ಕಾನೂನು ಬಾಹಿರ ಬಂಧನ ಮುಗಿಯುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ನಿಮಗೆ ಋಣಿಯಾಗಿದ್ದೇನೆ. ಇದು ಇಲ್ತಿಜಾ ಸೈನಿಂಗ್ ಆಫ್. ಅಲ್ಲಾ ನಿಮ್ಮನ್ನು ರಕ್ಷಿಸಲಿ ಎಂದು ಬರೆದುಕೊಂಡಿದ್ದರು.
ಪಿಡಿಪಿ ಮುಖ್ಯಸ್ಥೆ ಮುಫ್ತಿಯವರು ಬಿಡುಗಡೆಯಾಗಿರುವ ಕುರಿತು ಜಮ್ಮು ಕಾಶ್ಮೀರ ಸರ್ಕಾರದ ವಕ್ತಾರ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ. 370ನೇ ವಿಧಿ ರದ್ದು ಪಡಿಸಿದ ಬಳಿಕ ಮೆಹಮೂಬೂಬಾ ಮುಫ್ತಿಯವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಅವರ ಮನೆಯಲ್ಲಿಯೇ ಅವರನ್ನು ಬಂಧಿಸಲಾಗಿತ್ತು.
Laxmi News 24×7