ಕಾರ್ಕಳ/ಉಡುಪಿ: ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಂಬಂಧಿಸಿದ ನಿಯಮ ಗಳಿಗೆ ತಿದ್ದುಪಡಿ ಆಗ್ರಹಿಸಿ ರಾಜ್ಯದೆಲ್ಲೆಡೆ ಕ್ರಷರ್ ಘಟಕಗಳು ವಾರದಿಂದ ಚಟುವಟಿಕೆ ಸ್ಥಗಿತಗೊಳಿಸಿವೆ. ಜಲ್ಲಿ, ಎಂಸ್ಯಾಂಡ್ ಕೊರತೆಯ ನೇರ ಪರಿಣಾಮ ಇತರೆಲ್ಲ ಕ್ಷೇತ್ರಗಳ ಮಾರಾಟಗಾರ ಮೇಲಾಗಿದ್ದು, ಉದ್ಯಮ ಕೋಟ್ಯಂತರ ರೂ.
ನಷ್ಟದ ಜತೆಗೆ ಲಕ್ಷಾಂತರ ಕಾರ್ಮಿಕರು ಅತಂತ್ರರಾಗಿದ್ದಾರೆ.
ಜಲ್ಲಿ, ಎಂಸ್ಯಾಂಡ್ ಕೊರತೆಯ ನೇರ ಪರಿಣಾಮ ಹೋಲೋಬ್ಲಾಕ್, ಇಂಟರ್‌ಲಾಕ್ ನಿರ್ಮಾಣ ಘಟಕಗಳು, ಸಿಮೆಂಟ್, ಕಬ್ಬಿಣ ಖರೀದಿ, ವಿದ್ಯುತ್, ಕಲ್ಲು, ಮರಳು, ಬಡಗಿ, ಗಾರೆ, ಕೂಲಿ ಕಾರ್ಮಿಕರು ಹೀಗೆ ಎಲ್ಲ ಕ್ಷೇತ್ರಗಳ ಮತ್ತು ಜನರ ಮೇಲಾಗುತ್ತಿದೆ. ಬಡವರ ಕನಸಿನ ಮನೆ ಸೇರಿದಂತೆ ವಿವಿಧ ಯೋಜನೆಗಳ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಆರ್ಥಿಕ ವರ್ಷಾಂತ್ಯ ಮಾರ್ಚ್‌ನೊಳಗೆ ಪೂರ್ಣಗೊಳಿಸಬೇಕಿರುವ ರಸ್ತೆ ಇನ್ನಿತರ ಕಾಮಗಾರಿಗಳಿಗೂ ಹಿನ್ನಡೆ ಯಾಗಿದೆ.
ಟ್ರಾನ್ಸ್ ಪೋರ್ಟ್ ಸ್ಥಗಿತ,
ಡೀಸೆಲ್ ಮಾರಾಟ ಇಳಿಕೆ
ನಿರ್ಮಾಣ ಕಾರ್ಯ ಸ್ಥಗಿತವಾಗಿರು ವುದರಿಂದ ಅದಕ್ಕೆ ಪೂರಕವಾದ ಉದ್ಯಮಗಳ 7 ಲಕ್ಕಕ್ಕೂ ಅಧಿಕ ಕಾರ್ಮಿಕರ ಉದ್ಯೋಗ ನಷ್ಟವಾಗಿದೆ. ಸಿಮೆಂಟ್, ಕಚ್ಚಾ ವಸ್ತುಗಳ ಮಾರಾಟಗಾರರು ನಷ್ಟಕ್ಕೆ ಒಳಗಾಗಿದ್ದಾರೆ. 50 ಸಾವಿರದಷ್ಟು ಲಾರಿ ಗಳು ಓಡಾಟ ನಿಲ್ಲಿಸಿರುವುದರಿಂದ ಟ್ರಾನ್ಸ್ ಪೋರ್ಟ್ ಉದ್ಯಮ ನಷ್ಟಕ್ಕೆ ಸಿಲುಕಿದೆ. ಡೀಸೆಲ್ ಮಾರಾಟದಲ್ಲೂ ಇಳಿಕೆಯಾಗಿದೆ.
ಕೋಟ್ಯಂತರ ನಷ್ಟದ ಭೀತಿ
ರಾಜ್ಯಕ್ಕೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮುಂತಾದ ಕಡೆಗಳಿಂದಲೂ ಜಲ್ಲಿ, ಎಂಸ್ಯಾಂಡ್ ಬರುತ್ತಿತ್ತು. ಅದನ್ನೀಗ ತಡೆಯುತ್ತಿರುವ ಕಾರಣ ದಾಸ್ತಾನು ಖಾಲಿಯಾದ ಬಳಿಕ ನಿರ್ಮಾಣ ಸಹಿತ ಇತರೆಲ್ಲ ಕ್ಷೇತ್ರಗಳು ಭಾರೀ ನಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ.
ಬೇಡಿಕೆಗಳೇನು?
ಕಾನೂನು ಬದ್ಧವಾಗಿ ಕಲ್ಲುಗಣಿಗಾರಿಕೆ ನಡೆಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಂಬಂಧ ಪಟ್ಟ ಕೆಎಂಎಂಸಿಆರ್-1994 ನಿಯಮಗಳಲ್ಲಿ ತಿದ್ದುಪಡಿ ಅಗತ್ಯ. ಸಮರ್ಪಕ ತಿದ್ದುಪಡಿ ಆಗದೇ ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಸೆಂಟರ್ ನೀಡಿರುವ ಆದೇಶವನ್ನು ಕೆಎಂಎಎಂಸಿ ಆರ್-1994 ನಿಯಮಗಳಿಗೆ ತಿದ್ದುಪಡಿ ಆದ ಅನಂತರ ಅನುಷ್ಠಾನಗೊಳಿಸಬೇಕು ಎನ್ನುವ ಬೇಡಿಕೆಯನ್ನು ಕ್ರಷರ್‌ಗಳ ಮಾಲಕರು ಸರಕಾರದ ಮುಂದಿರಿಸಿದ್ದಾರೆ.
ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಕೇಂದ್ರಕ್ಕೆ ಗುತ್ತಿಗೆ ನೀಡಿರುವುದು ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ. ಕೋರೆಗಳ ಮಾಲಕರು ದಿವಾಳಿಯಾಗುವಂತ ಸರಕಾರದ ನಿಯಾಮವಳಿಗಳನ್ನು ರದ್ದುಪಡಿಸಬೇಕು ಎಂದು ಬೆಳಗಾವಿ ಸುವರ್ಣಸೌಧದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕ್ರಷರ್ ಮಾಲಕರು ಎರಡು ತಿಂಗಳ ಮಟ್ಟಿಗೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸರಕಾರ ಮಧ್ಯಪ್ರವೇಶಿಸುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಸದನದಲ್ಲೂ ಈ ವಿಚಾರ ಪ್ರಸ್ತಾವಗೊಂಡಿದೆ.
ಅಂಕಿ ಅಂಶ
-ರಾಜ್ಯದಲ್ಲಿರುವ ಕ್ರಷರ್‌ಗಳು – 1,980
-ಲೀಸಿಗೆ ಪಡೆದ ಕಲ್ಲಿನ ಕೋರೆಗಳು – 4,800
-ಕಾರ್ಮಿಕರು – 17 ಲಕ್ಷ
-ಸರಕಾರಕ್ಕೆ ವಾರ್ಷಿಕ ಆದಾಯ – 6 ಸಾವಿರ ಕೋ.ರೂ.
-ವಾರ್ಷಿಕ ವಹಿವಾಟು – 50 ಸಾವಿರ ಕೋ ರೂ.
-45 ಸಾವಿರ ಲಾರಿಗಳ ಓಡಾಟ ಸ್ಥಗಿತ
ಸರಕಾರದ ಮಟ್ಟದಲ್ಲಿ ಮಾತುಕತೆ, ಚರ್ಚೆಗಳು ನಡೆದಿವೆಯಾದರೂ ಅಂತಿಮ ನಿರ್ಧಾರಕ್ಕೆ ಬರುವಲ್ಲಿ ಸರಕಾರ ವಿಫಲವಾಗಿದೆ. ಶೀಘ್ರ ಸಮಸ್ಯೆ ಇತ್ಯರ್ಥವಾಗುವ ವಿಶ್ವಾಸವಿದೆ.
– ರವೀಂದ್ರ ಶೆಟ್ಟಿ,
ರಾಜ್ಯಾಧ್ಯಕ್ಷ, ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಫೆಡರೇಶನ್