ಬೆಂಗಳೂರು: ಸರಕಾರದ ವಿವಿಧ 44 ಇಲಾಖೆಗಳಲ್ಲಿ 2.58 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷದಲ್ಲಿ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿರುವುದಾಗಿ ಹೇಳಿರುವುದು ಹೊಸ ಭರವಸೆ ಮೂಡಿಸಿದೆ.
ಗಮನಾರ್ಹ ವಿಚಾರವೆಂದರೆ ಪ್ರತಿನಿತ್ಯ ಜನರೊಂದಿಗೆ ಹೆಚ್ಚು ಒಡನಾಡಬೇಕಾದ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಕಂದಾಯ, ಗೃಹ ಇಲಾಖೆಗಳಲ್ಲೇ ಹೆಚ್ಚು ಹುದ್ದೆಗಳು ಖಾಲಿ ಇವೆ. ಕೆಲವು ತಿಂಗಳಲ್ಲಿ ಒಂದಿಷ್ಟು ನೇಮಕಾತಿ ಪ್ರಕ್ರಿಯೆಗಳು ನಡೆದಿದ್ದರೂ, ಯಾವುದೂ ಅಂತಿಮಗೊಂಡಿಲ್ಲ. ರಾಜ್ಯದ ವಿವಿಧ 44 ಇಲಾಖೆಗಳಲ್ಲಿ 7.70 ಲಕ್ಷ ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 5.11 ಲಕ್ಷ ಹುದ್ದೆಗಳು ಭರ್ತಿ ಆಗಿದ್ದು, 2.58 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ.

ಮುಖ್ಯವಾಗಿ ಸರಕಾರದ ವಿವಿಧ ಇಲಾಖೆಗಳಲ್ಲಿ ಸಿ ಮತ್ತು ಡಿ ಗ್ರೂಪ್ 82 ಸಾವಿರ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗ ಕಳೆದ ಐದು ವರ್ಷಗಳಲ್ಲಿ ನೇಮಕಾತಿ ನಡೆಸಿದ್ದು 20 ಸಾವಿರ ಹುದ್ದೆಗಳಿಗೆ ಮಾತ್ರ. ಕೃಷಿ, ಶಿಕ್ಷಣ, ಆರ್ಥಿಕ, ಎಸ್ಸಿ-ಎಸ್ಟಿ, ಒಬಿಸಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೌಶಲಾಭಿವೃದ್ಧಿ ಇಲಾಖೆಗಳಲ್ಲಿ ಅರ್ಧದಷ್ಟು ಹುದ್ದೆಗಳು ಖಾಲಿ ಇದ್ದಾವೆ.
Laxmi News 24×7