ಬೆಂಗಳೂರು: ಕೆಲ ದಿನಗಳಿಂದ ರಾಜಕೀಯ ಮರು ಪ್ರವೇಶದ ಬಗ್ಗೆ ಕುತೂಹಲಕ್ಕೆ ಕಾರಣವಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಿಸಿಕೊಂಡಿದ್ದಾರೆ. ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂದು ಹೊಸ ಪಕ್ಷ ಸ್ಥಾಪಿಸಿ ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸುವುದಾಗಿ ಇಂದು ಹೇಳಿದ್ದಾರೆ.
ಬಸವಣ್ಣನವರು ಹೇಳಿದ ಹಾಗೆ ಯಾವುದೇ ಜಾತಿ ಮತ ಭೇದ ಇಲ್ಲದ ಹಾಗೆ, ಮೇಲು ಕೀಳು ಇಲ್ಲದ ಹಾಗೆ ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡುವ ಸಲುವಾಗಿ, ವಾಜಪೇಯಿ ಅವರನ್ನ ಸ್ಮರಿಸುತ್ತಾ ಸಾರ್ವಜನಿಕ ಬದುಕಿಗೆ ಬರಬೇಕು ಅಂತ ತೀರ್ಮಾನಿಸಿದ್ದೇನೆ. ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಕಟ್ಟಿ ಮುಂದೆ ಹೆಜ್ಜೆ ಹಾಕುತ್ತೇನೆ. ಹೊಸ ಪಕ್ಷದೊಂದಿಗೆ ರಾಜ್ಯಾದ್ಯಂತ ಮನೆ ಮನೆಗೆ ಹೋಗುತ್ತೇನೆ. ರಾಜ್ಯದ ಅಭಿವೃದ್ಧಿ ಗುರಿ ಇಟ್ಟುಕೊಂಡು ಪಕ್ಷ ಸ್ಥಾಪನೆ ಮಾಡುತ್ತಿದ್ದೇನೆ ಎಂದು ಜನಾರ್ದನ ರೆಡ್ಡಿ ಘೋಷಿಸಿದರು.
ಗಣಿಗಾರಿಕೆ ವಿಚಾರದಲ್ಲಿ ನನ್ನ ಮೇಲೆ ಆರೋಪ ಮಾಡಿದ್ದರು. ಅಕ್ರಮ ಗಣಿಗಾರಿಕೆಯೆಂದು ರಾಜಕೀಯ ವಿರೋಧಿಗಳು ಅಪಪ್ರಚಾರ ಮಾಡಿದರು. ಸತ್ಯವಾಗಿ ಹೇಳುತ್ತೇನೆ, ನಾನು ಅಕ್ರಮ ಗಣಿಗಾರಿಕೆ ಮಾಡಿಲ್ಲ. ನಾನು ಮಾಡಿದ್ದು ಸಕ್ರಮ ಗಣಿಗಾರಿಕೆ. ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ನಾನು ನಿರ್ದೋಷಿಯಾಗಿ ಬರುತ್ತೇನೆ. ಅಕ್ರಮವಾಗಿ ನನ್ನನ್ನು ಬಂಧನ ಮಾಡಲೇಬೇಕು ಅಂತ ಬಂಧನ ಮಾಡಿದರು. ಸುಷ್ಮಾ ಸ್ವರಾಜ್ ಗೆ ಸಹಾಯ ಮಾಡಿದ್ದಕ್ಕೆ 2011 ರಲ್ಲಿ ನನಗೆ ಬಂಧನ ಮಾಡಿದರು. ನಾನು ಕಷ್ಟದಲ್ಲಿ ಇದ್ದಾಗ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಬಿಟ್ಟು ಇನ್ಯಾರು ನನ್ನ ಮನೆಗೆ ಬಂದಿರಲಿಲ್ಲ. ಅವರು ಇಬ್ಬರು ಮಾತ್ರ ನನಗೆ ಧೈರ್ಯ ತುಂಬಿದ್ದರು. ಅವರನ್ನು ನಾನು ನೆನಪು ಮಾಡಿಕೊಳ್ಳುತ್ತೇನೆ ಎಂದರು.
ನನ್ನವರೇ ಅಂತ ನಾನು ಎಲ್ಲರನ್ನೂ ಮೆರೆಸಿ ಮೋಸ ಹೋದೆ. ಇದನ್ನು ನನ್ನ ಸ್ನೇಹಿತರು ಈಗಲೂ ಹೇಳುತ್ತಾರೆ. ನನ್ನ ಜೊತೆ ಕಷ್ಟದಲ್ಲಿ ಯಾರು ಬಂದಿಲ್ಲ. ನಾನು ಚೆನ್ನಾಗಿ ಇದ್ದಾಗ ಎಲ್ಲರು ಹೊಗಳಿದರು, ಆದರೆ ಕಷ್ಟದಲ್ಲಿ ಯಾರು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Laxmi News 24×7