ಬಾಗಲಕೋಟೆ: ”ಬಸನಗೌಡ ಪಾಟೀಲ್ ಯತ್ನಾಳ ಅವರು ಮೊನ್ನೆ ದೆಹಲಿಯಲ್ಲಿ ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದು ಬಂದಿದ್ದೇಕೆ? ತಮ್ಮನ್ನು ಮತ್ತು ಯಡಿಯೂರಪ್ಪ ಅವರನ್ನು ಒಂದು ಮಾಡಿ ಅಂತ ಕಾಲಿಗೆ ಬಿದ್ದು ಬಂದಿಲ್ವಾ…?”
ಬಾಗಲಕೋಟೆ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ರೀತಿ ಪ್ರಶ್ನಿಸಿದವರು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ.
”ನಿರಾಣಿಯವರು ಬಿಜೆಪಿ ಟಿಕೆಟ್ಗಾಗಿ ನನ್ನ ಮನೆ ಕಾಯ್ತಿದ್ದರು” ಎಂಬುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿರುವ ಹೇಳಿಕೆಗೆ ನಿರಾಣಿ ಈ ರೀತಿ ತಿರುಗೇಟು ನೀಡಿದರು.
”ನಾನು ಹೋಗಿ ಟಿಕೆಟ್ ಕೇಳಿರಬಹುದು. ಯಾಕೆಂದರೆ ನಾನು ಅಷ್ಟು ದೊಡ್ಡ ವ್ಯಕ್ತಿಯಲ್ಲ. ನಾನು ಟಿಕೆಟ್ಗಾಗಿ ಸಾಕಷ್ಟು ಜನರ ಮನೆ ಬಾಗಿಲಿಗೆ ಹೋಗಿದ್ದೇನೆ. ಇವರ ಮನೆ ಬಾಗಿಲಿಗೂ ಹೋಗಿರಬಹುದು. ಇವರು (ಯತ್ನಾಳ) ಟಿಕೆಟ್ಗಾಗಿ, ಮಂತ್ರಿ ಆಗೋದಕ್ಕಾಗಿ ಯಾರ್ಯಾರ ಮನೆ ಬಾಗಿಲಿಗೆ ಹೋಗಿದಾರೆ, ಯಾರ್ಯಾರ ಕಾಲಿಗೆ ಬಿದ್ದಿದಾರೆ ಅಂತ ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದರು.
”ರಾಜ್ಯದಲ್ಲಿ ಪಂಚಮಸಾಲಿ ಸಮಾಜವನ್ನು ಜಾತಿ ಕಾಲಂನಲ್ಲಿ ತಂದಿದ್ದೇ ಯಡಿಯೂರಪ್ಪ. ಯಡಿಯೂರಪ್ಪ ಸಿಎಂ ಆಗಿದ್ದಾಗ ಪಂಚಮಸಾಲಿ ಸಮಾಜವನ್ನು ಜಾತಿ ಕಾಲಂಗೆ ಸೇರಿಸುವಂತೆ ನಾನೇ ಪ್ರಸ್ತಾಪ ಮಾಡಿದ್ದೆ. ಮೀಸಲಾತಿ ಹೋರಾಟ 30 ವರ್ಷಗಳದ್ದು. ಜಾತಿ ಕಾಲಂನಲ್ಲಿ ಪಂಚಮಸಾಲಿ ಇರಲಿಲ್ಲ. 2012ರಲ್ಲಿ ಕ್ಯಾಬಿನೆಟ್ ಸಬ್ ಕಮಿಟಿ ಮಾಡಿದ್ರು. ಸಿ.ಎಂ. ಉದಾಸಿ, ನಾನು, ಬೊಮ್ಮಾಯಿ, ನಾರಾಯಣಸ್ವಾಮಿ ಇದ್ದೆವು. ಮೊದಲಿಗೆ ಜಾತಿ ಕಾಲಂನಲ್ಲಿ ತರುವ ಕೆಲಸ ಆಯಿತು. ಬಳಿಕ 2ಎಗೆ ಸೇರಿಸಲು ಹೇಳಿದಾಗ ಕಮಿಟಿ ಮಾಡಿದರು. ಬಳಿಕ ಬಂದ ಸರ್ಕಾರಗಳು ಮುಂದೆ ಪ್ರಯತ್ನ ಮಾಡಲಿಲ್ಲ. ಅದು ಅಲ್ಲಿಗೆ ನಿಂತಿತ್ತು. ಆದರೆ ಪಂಚಮಸಾಲಿ ಸಮಾಜವನ್ನು ಜಾತಿ ಕಾಲಂಗೆ ತಂದಿದ್ದೆ ಯಡಿಯೂರಪ್ಪ” ಎಂದು ಹೇಳಿದರು
Laxmi News 24×7