ರಾಯಚೂರು: ಇತ್ತೀಚೆಗಷ್ಟೇ ಯುವಕನೊಬ್ಬ ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಭಾರಿ ಸದ್ದು ಮಾಡಿದ್ದ ಸಿರವಾರ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ ಅವರನ್ನು ಇದೀಗ ಅಮಾನತು ಮಾಡಲಾಗಿದೆ.
ಸಾರ್ವಜನಿಕರಿಂದ ದೂರುಗಳ ಸುರಿಮಳೆ ಬಂದ ಹಿನ್ನೆಲೆಯಲ್ಲಿ’ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರು ಗೀತಾಂಜಿಲಿ ಶಿಂಧೆ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಸುಖಾಸುಮ್ಮನೆ ಕಿರುಕುಳ ನೀಡುತ್ತಾರೆ ಎಂದು ಸಾಕಷ್ಟು ಜನರು ಗೀತಾಂಜಲಿ ಶಿಂಧೆ ವಿರುದ್ಧ ಆರೋಪ ಮಾಡಿದ್ದರು. ಡೆತ್ನೋಟ್ ಬರೆದಿಟ್ಟು ಯುವಕನೊಬ್ಬ ನಾಪತ್ತೆಯಾಗಿದ್ದ ಪ್ರಕರಣ ಆರೋಪಗಳನ್ನು ಸಾಕ್ಷೀಕರಿಸಿತ್ತು.
ಏನಿದು ಯುವಕನ ಡೆತ್ನೋಟ್ ಪ್ರಕರಣ?
ಪಿಎಸ್ಐ ಗೀತಾಂಜಲಿ ಶಿಂಧೆ ಅವರು ಮೂರು ತಿಂಗಳಿಂದ ವಿನಾಕಾರಣ ಠಾಣೆಗೆ ಕರೆಸಿ ನನಗೆ ಕಿರುಕುಳ ನೀಡುತ್ತಿದ್ದರು ಎಂದು ಸಿರವಾರದ ತಾಯಣ್ಣ ಎಂಬ ಯುವಕ ಆರೋಪ ಮಾಡಿ, ಡಿ.3ರಂದು ಡೆತ್ನೋಟ್ ಬರೆದು ನಾಪತ್ತೆಯಾಗಿದ್ದ. ಕೆಲ ಬಳಿಕ ಯುವಕ ಪತ್ತೆಯಾಗಿದ್ದ. ಮೂರ್ನಾಲ್ಕು ದಿನ ಮಗ ಕಾಣದಿದ್ದಾಗ ಎಸ್‌ಐ ಗೀತಾಂಜಲಿ ಶಿಂಧೆ ವಿರುದ್ಧ ತಾಯಣ್ಣನ ಪಾಲಕರು ದೂರು ದಾಖಲಿಸಿದ್ದಾರೆ. ತಾನು ಪಿಎಸ್ಐ ಆಗಿದ್ದ ಸಿರವಾರ ಠಾಣೆಯಲ್ಲೇ ಗೀತಾಂಜಲಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಸಂಬಂಧಿಕರ ಜಮೀನಿನ ಭತ್ತ ಕಟಾವು ಮಾಡಿದ್ದ ಆರೋಪವನ್ನು ತಾಯಣ್ಣ ಹೊತ್ತಿದ್ದ. ಆತನ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಡಿ.02ರಂದು ತಾಯಣ್ಣನನ್ನು ಗೀತಾಂಜಲಿ ಠಾಣೆಗೆ ಕರೆಸಿದ್ದರು. ಬಹಳ ಹೊತ್ತು ಲಾಕಪ್ನಲ್ಲಿ ಕೂರಿಸಿದ್ದರಿಂದ ಮನನೊಂದು ನಾಪತ್ತೆಯಾಗಿರುವುದಾಗಿ ಯುವಕ ಡೆತ್ನೋಟ್ನಲ್ಲಿ ಉಲ್ಲೇಖಸಿದ್ದ.
ಡೆತ್ನೋಟ್ನಲ್ಲಿ ಏನಿತ್ತು?
ನಾನು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಪಿಎಸ್ಐ ಗೀತಾಂಜಲಿ ಶಿಂಧೆ ಅವರೇ ಕಾರಣ. ನನಗೆ ನಿರಂತರ ಕಿರುಕುಳ ನೀಡುತ್ತಿದ್ದು, ದೌರ್ಜನ್ಯ ಎಸಗುತ್ತಿದ್ದಾರೆ. ಇದರಿಂದ ಭಯಭೀತನಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ಹೊರಗಡೆ ಹೋದಾಗಲೆಲ್ಲ ಜೀಪ್ ನಿಲ್ಲಿಸಿ, ನನಗೆ ಹೊಡೆದಂತಹ ಅನೇಕ ಪ್ರಸಂಗಗಳು ಇವೆ. ಅದನ್ನು ಈವರೆಗೂ ನಾನು ಯಾರಿಗೂ ಹೇಳಿಕೊಂಡಿರಲಿಲ್ಲ. ಇದೀಗ ನಾನು ಬಹಳಷ್ಟು ನೊಂದಿದ್ದೇನೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.
ನಿನ್ನೆ ಸಾಯಂಕಾಲ ನನ್ನನ್ನು ಠಾಣೆಗೆ ಕರೆಸಿದರು. ನಾನು ಮಾವನ ಮನೆಯಿಂದ ನೇರವಾಗಿ ಪೊಲೀಸ್ ಠಾಣೆಗೆ ಹೋದೆ. ಆದರೆ, ನನ್ನನ್ನು ವಿಚಾರಣೆ ಮಾಡದೇ ಲಾಕಪ್ನಲ್ಲಿ ಕೆಲ ಕಾಲ ಕೂರಿಸಿ ಹಿಂಸೆ ನೀಡಿದರು. ಸ್ವಲ್ಪ ಸಮಯದ ಬಳಿಕ ನನ್ನನ್ನು ಬಿಡುಗಡೆ ಮಾಡಿದರು. ಆದರೆ, ವಿಚಾರಣೆ ಮಾತ್ರ ಮಾಡಲಿಲ್ಲ. ಇದರಿಂದ ನಾನು ಬಹಳ ನೊಂದಿದ್ದೇನೆ. ನನ್ನನ್ನು ಏಕಾಏಕಿ ಲಾಕಪ್ನಲ್ಲಿ ಹಾಕಿದ್ದಾರೆ. ಇದು ತುಂಬಾ ನೋವಾಗಿದೆ.