ಚನ್ನಗಿರಿ: ಎಸ್‌ಸಿ, ಎಸ್‌ಟಿ ಮೀಸಲಾತಿ ಸಂಬಂಧ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
‘ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಶೇ 17 ಹಾಗೂ ಪಂಗಡದವರಿಗೆ ಶೇ 7 ಮೀಸಲಾತಿ ನೀಡಿರುವುದು ಸ್ವಾಗತಾರ್ಹ. ಆದರೆ ಇಷ್ಟಕ್ಕೆ ವಿಜಯೋತ್ಸವ ಆಚರಣೆ ಮಾಡಲು ಆಗುವುದಿಲ್ಲ. ಸದ್ಯ ಸರ್ಕಾರ ಕೇವಲ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಆಗುವವರಿಗೆ ಮಾತ್ರ ಮೀಸಲಾತಿಯನ್ನು ಕಲ್ಪಿಸುತ್ತಿದೆ. ಆದರೆ ಸರ್ಕಾರಿ ಉದ್ಯೋಗಳಲ್ಲಿ ಮೀಸಲಾತಿ ನೀಡುತ್ತಿಲ್ಲ. ಎಸ್‌ಸಿ, ಎಸ್‌ಟಿ ಸಮುದಾಯದವರು ಒಗ್ಗಟ್ಟಾಗಬೇಕು’ ಎಂದು ಸಲಹೆ ನೀಡಿದರು.
‘ಫೆಬ್ರುವರಿ 8, 9ರಂದು ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ 5ನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಹೊದಿಗೆರೆ ರಮೇಶ್, ಭೋವಿ ಸಮಾಜದ ಅಧ್ಯಕ್ಷ ಗರಗದ ರಾಜಪ್ಪ, ಛಲವಾದಿ ಸಮಾಜದ ಮುಖಂಡ ಸಿ. ನಾಗರಾಜ್, ತಾಲ್ಲೂಕು ಬಣಜಾರ ಸಮಾಜದ ಅಧ್ಯಕ್ಷ ಬಿ. ವೀರೇಶ್ ನಾಯ್ಕ, ಪಿ. ಲೋಹಿತ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್. ಲೋಕೇಶ್, ಜಯಣ್ಣ ಇದ್ದರು.